ಕೋಟೇಶ್ವರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ

Views: 88
ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ಈ ಅವಕಾಶವನ್ನು ಜ್ಞಾನ ಸಂಪಾದನೆ, ಮುಂದಿನ ಜೀವನದ ಬುನಾದಿ ರೂಪಿಸಲು ಬಳಸಬೇಕು. ಈ ಹಂತದಲ್ಲಿ ವಿದ್ಯಾರ್ಥಿಗಳು ದುಶ್ಚಟದ ದಾಸರಾದರೆ ಅವರ ಕುಟುಂಬ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಪಿಡುಗಾಗುತ್ತಾರೆ. ಅಧ್ಯಾಪಕರು ಮತ್ತು ಪೋಷಕರ ಸೂಕ್ತ ನಿಗಾ ಮತ್ತು ವಿದ್ಯಾರ್ಥಿಯ ಆತ್ಮವಿಶ್ವಾಸಗಳಿಂದ ವ್ಯಸನಗಳಿಗೆ ಬಲಿಯಾಗದಂತೆ ತಡೆಯಬಹುದು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಶ್ಲಾಘನೀಯ ಕಾರ್ಯಗಳನ್ನು ಮಾಡುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೋಟೇಶ್ವರ ವಲಯದ ಆಶ್ರಯದಲ್ಲಿ ಕೋಟೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿರಬೇಕಾದ ಶಿಸ್ತಿನ ಕ್ರಮ, ದುಷ್ಚಟಗಳಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅವರು ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ವಹಿಸಿದ್ದರು.
ಕೋಟೇಶ್ವರ ಬಿ ಒಕ್ಕೂಟದ ಅಧ್ಯಕ್ಷೆ ಅರುಂಧತಿ ವೈದ್ಯ, ಕೋಟೇಶ್ವರ ವಲಯ ಮೇಲ್ವಿಚಾರಕಿ ವೇದಾವತಿ ಸೇವಾ ಪ್ರತಿನಿಧಿಗಳಾದ ಮಾಲತಿ ಮತ್ತು ಶೋಭಾ ಉಪಸ್ಥಿತರಿದ್ದರು.
ಉಪನ್ಯಾಸಕ ಜಗದೀಶ್ ಎಚ್. ನಾಯಕ ಸ್ವಾಗತಿಸಿದರು. ದ್ವಿತೀಯ ಪದವಿ ವಿದ್ಯಾರ್ಥಿ ಪ್ರೀತಮ್ ಪ್ರತಿಜ್ಞಾವಿಧಿ ನೆರವೇರಿಸಿದರು. ಉಪನ್ಯಾಸಕ ಗಣೇಶ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ ಕೋಟೇಶ್ವರ ಎ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಜಯಂತಿ ಎಸ್.ಶೆಟ್ಟಿ ವಂದಿಸಿದರು.