ಧಾರ್ಮಿಕ

ಕರಾವಳಿ ಪದ್ಮಶಾಲಿ/ಶೆಟ್ಟಿಗಾರರ ಮೂಲ ಕ್ಷೇತ್ರ ಬಾರ್ಕೂರಿನಲ್ಲಿ ಧರ್ಮದರ್ಶಿಗಳ ಚಿಂತನಾ ಸಭೆ ಸಂಪನ್ನ 

Views: 190

ಬಾರ್ಕೂರು: ಕರ್ನಾಟಕ ಕರಾವಳಿ ಪದ್ಮಶಾಲಿ/ಶೆಟ್ಟಿಗಾರರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 20ರಂದು ಧರ್ಮದರ್ಶಿಗಳ ಚಿಂತನಾ ಸಭೆ ನಡೆಯಿತು.

ಆರಂಭದಲ್ಲಿ ದೇವಳದ ಶ್ರೀ ದುರ್ಗಾಪರಮೇಶ್ವರಿ ಮಹಿಳಾ  ವೇದಿಕೆ ಸದಸ್ಯರು ಧರ್ಮದರ್ಶಿಗಳನ್ನು ಅದ್ಧೂರಿಯಾಗಿ  ಬರಮಾಡಿಕೊಂಡಿದ್ದಾರೆ. ಎಲ್ಲಾ ಧರ್ಮದರ್ಶಿಗಳ ಸಮ್ಮುಖದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಕುರಿತು ಕರಾವಳಿ ಪದ್ಮಶಾಲಿ/ ಶೆಟ್ಟಿಗಾರ ಸಮಾಜದವರು ಆರಾಧಿಸಿಕೊಂಡು ಬಂದಿರುವ ಶ್ರೀ ವೀರಭದ್ರ ದೇವಸ್ಥಾನಗಳ ಧರ್ಮದರ್ಶಿಗಳು/ ಅಧ್ಯಕ್ಷರು/ ಗುರಿಕಾರರು ಭಾಗವಹಿಸುವ ಈ ಚಿಂತನಾ ಸಭೆಯನ್ನು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ದೇವಾಲಯದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ನಮ್ಮೊಂದಿಗೆ ಸಹಕಾರ ನೀಡಿ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವಂತಹ ಮಾದರಿ ಕಾರ್ಯಕ್ರಮಕ್ಕೆ  ಸಂಪೂರ್ಣ ಸಹಕಾರ ಕೋರಿದರು.

ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಶ್ರೀ ಎನ್. ರಮೇಶ್ ಭಟ್ ಆಶೀರ್ವಚನ ನೀಡಿ, ಸಮಾಜದ ಸಂಪೂರ್ಣ ಅಭಿವೃದ್ಧಿಯಾಗಬೇಕಾದರೆ ಮೂಲ ಕ್ಷೇತ್ರದ ಬಗ್ಗೆ ಚಿಂತನೆ ಆಗಬೇಕು. ಮೂಲ ಕ್ಷೇತ್ರಗಳು ಮತ್ತು ಇತರ15 ದೇವಸ್ಥಾನಗಳು ಮರದ ಬೇರು ಮತ್ತು ಕೊಂಬೆ ಇದ್ದಂತೆ ಎಲ್ಲಾ ದೇಗುಲದ ಸಮಾಜದ ಯೋಗ ಕ್ಷೇಮದಲ್ಲಿ ಮೂಲ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಪ್ರಕ್ರಿಯೆಗಳಾದ ಅನ್ನದಾನ, ಸತ್ಕರ್ಮವಿದ್ದಾಗ ಮಾತ್ರ ದೇವಸ್ಥಾನ ಮತ್ತು ಸಮಾಜ ಬೆಳಗಲು ಸಾದ್ಯ. ಆ ನಿಟ್ಟಿನಲ್ಲಿ 15 ದೇವಸ್ಥಾನದ ತಂತ್ರಗಳು ಮೂಲ ದೇವಸ್ಥಾನದ ಪೂಜಾ ವಿಧಿ ವಿಧಾನದಲ್ಲಿ ಭಾಗವಹಿಸಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾರ್ಕೂರು ದೇಗುಲದ ಆಡಳಿತ ಮೊಕ್ತೇಸರರಾದ ಡಾ. ಜಯರಾಮ್ ಶೆಟ್ಟಿಗಾರ್ ಅವರು ಮಾತನಾಡಿ, ಮೂಲ ಕ್ಷೇತ್ರದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ವಾರ್ಷಿಕ ಪೂಜಾ ಕೈಂಕರ್ಯದಲ್ಲಿ ಎಲ್ಲಾ 15 ದೇವಸ್ಥಾನದವರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಈಗಲೂ ಸಂಪ್ರದಾಯ ನಡೆಸಿಕೊಂಡು ಬಂದಿದ್ದೇವೆ.

ಮೂಲ ಕ್ಷೇತ್ರದ ಬಗ್ಗೆ ಇಡೀ ಪ್ರಪಂಚದಲ್ಲಿ ಈ ಬಗ್ಗೆ ಹೋರಾಟ ನಡೆಯುತ್ತಿರುವಾಗ ನಮ್ಮ ಸಮಾಜದಲ್ಲಿಯೂ ಅಭಿವೃದ್ಧಿ, ಐಕ್ಯಮತ್ಯ, ಒಗ್ಗಟ್ಟು ಸಾಧಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಭಾಗವಹಿಸಬೇಕು. ಮೂಲ ಕ್ಷೇತ್ರಕ್ಕೆ ಇರುವ ಸಂಬಂಧವನ್ನು ಕಲ್ಪಿಸಲು ತಾವೆಲ್ಲರೂ ಸಕ್ರಿಯರಾಗಿ  ಸ್ವಯಂಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಹೊರೆ ಕಾಣಿಕೆ, ವಾರ್ಷಿಕ ಪೂಜೆ ಬೃಹ್ಮಕಲಶೋತ್ಸವ  ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.

ಚಿಂತನಾ ಸಭೆಗೆ ಆಗಮಿಸಿದ ಸಭೆಯಲ್ಲಿದ್ದ ಧರ್ಮ ದರ್ಶಿಗಳು ಮೂಲ ದೇವಸ್ಥಾನದಲ್ಲಿ ನಡೆಯುವ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಲು ಸಂಪೂರ್ಣ ಸಹಕಾರ ನೀಡಿದ್ದಲ್ಲದೆ, ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಕುರಿತು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಚಿಂತನಾ ಸಭೆಯಲ್ಲಿ ಸುಂದರ ಶೆಟ್ಟಿಗಾರ್ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಪಡುಬಿದ್ರಿ, ಸುರೇಶ್ ಶೆಟ್ಟಿಗಾರ್ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಸಾಲಿಕೇರಿ, ರತ್ನಾಕರ ಶೆಟ್ಟಿಗಾರ್ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಹಳೆಯಂಗಡಿ, ಹರೀಶ್ಚಂದ್ರ ಶೆಟ್ಟಿಗಾರ್ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಬಂಗ್ರ ಮಂಜೇಶ್ವರ, ಪ್ರಭಾಶಂಕರ ಪದ್ಮಶಾಲಿ ಶ್ರೀ ವೀರಭದ್ರ ದೇವಸ್ಥಾನ ಕಿನ್ನಿಮುಲ್ಕಿ,ಜಯಕರ ಶೆಟ್ಟಿಗಾರ್ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಕಾಪು, ಜ್ಯೋತಿಪ್ರಸಾದ್ ಶೆಟ್ಟಿಗಾರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಕಲ್ಯಾಣಪುರ, ಡಿ.ಪುರಂದರ ಶೆಟ್ಟಿಗಾರ್ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಮೂಲ್ಕಿ, ವಿವೇಕ್.ಬಿ.ಎಸ್ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಎರ್ಮಾಳು, ಐತಪ್ಪ ಶೆಟ್ಟಿಗಾರ್ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ( ರಿ) ಮಾಜಿ ಅಧ್ಯಕ್ಷರಾದ ರಾಮದಾಸ ಶೆಟ್ಟಿಗಾರ ಪಣಿಯಾಡಿ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ) ಉಡುಪಿ ಅಧ್ಯಕ್ಷರಾದ  ಲಕ್ಷ್ಮಣ ಕೊಡಿಯಾಲ್ ಬೈಲ್  ಭಾಗವಹಿಸಿದ್ದರು.

ದೇವಳದ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ ಸ್ವಾಗತಿಸಿದರು. ಮಾಜಿ ಮೊಕ್ತೇಸರ ಪುರುಷೋತ್ತಮ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ  ಸಮಿತಿಯ ಕಾರ್ಯದರ್ಶಿ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಕಾರ್ಯಕ್ರಮ ರೂಪಿಸಿದರು. ಬ್ರಹ್ಮಕಲಶೋತ್ಸವ  ಸಮಿತಿಯ ಅಧ್ಯಕ್ಷರಾದ ಹೆಚ್ಎ ಗೋಪಾಲ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಾಜದ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಮತ್ತೊಮ್ಮೆ ಸಭೆ ಸೇರಿ ಈ ಬಗ್ಗೆ ಚರ್ಚಿಸಬೇಕಿದೆ ಎಂದು ವಂದನಾರ್ಪಣೆ ಸಲ್ಲಿಸಿದರು.

 

 

Related Articles

Back to top button