ಅಮಾಸೆಬೈಲು: ಶೇಡಿಮನೆಯಲ್ಲಿ ವಿಷಕಾರಿ ಹಾವು ಕಚ್ಚಿ 3ನೇ ತರಗತಿ ವಿದ್ಯಾರ್ಥಿನಿ ಸಾವು

Views: 795
ಕನ್ನಡ ಕರಾವಳಿ ಸುದ್ದಿ: ವಿಷದ ಹಾವು ಕಚ್ಚಿ 3ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಆಗಸ್ಟ್ 3ರಂದು ಅಮಾಸೆಬೈಲು ಸಮೀಪ ಶೇಡಿಮನೆಯಲ್ಲಿ ನಡೆದಿದೆ.
ಶೇಡಿಮನೆ ಗ್ರಾಮದ ನಿವಾಸಿ ಶ್ರೀಧರ ಮಡಿವಾಳ ಅವರ ಪುತ್ರಿ ಸನ್ನಿಧಿ(8) ಮೃತಪಟ್ಟವಳು.ಮಾಂಡಿ ಮೂರುಕೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ.
ಆಗಸ್ಟ್ 3ರಂದು ರವಿವಾರ ಶಾಲೆಗೆ ರಜೆ ಇದ್ದಿದ್ದರಿಂದ ಆಕೆ ತೋಟದಲ್ಲಿ ಕೆಲಸ ಮಾಡುತ್ತಿರುವ ತಂದೆಯ ಬಳಿಗೆ ತೆರಳಿದ್ದಳು. ತಂದೆಯ ಸಮೀಪ ತಲುಪುವ ಮೊದಲೇ ತೋಟದಲ್ಲಿ ಯಾವುದೋ ವಿಷಕಾರಿ ಹಾವು ಕಚ್ಚಿದ್ದು ಬಾಲಕಿ ಬೊಬ್ಬಿಡುತ್ತ ಮನೆಗೆ ಓಡಿಬಂದಿದ್ದಳು. ಮನೆಯವರು ಕೂಡಲೇ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.
ಶ್ರೀಧರ್ ಹಾಗೂ ಜ್ಯೋತಿ ದಂಪತಿಯ ನಾಲ್ವರು ಮಕ್ಕಳಲ್ಲಿ ಸನ್ನಿಧಿ ಕೊನೆಯವಳು ಹಾಗೂ ಏಕ ಮಾತ್ರ ಪುತ್ರಿಯಾಗಿದ್ದಾಳೆ.
ತಂದೆ ಶ್ರೀಧರ ಅವರು ನೀಡಿರುವ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






