ಸಾಮಾಜಿಕ

ಬಾಲಕಿಯನ್ನು ಅಪಹರಿಸಿ ಹತ್ಯೆ:ಲೈಂಗಿಕ ದೌರ್ಜನ್ಯ ಶಂಕೆ..! ಆರೋಪಿ ಸೆರೆಗೆ ಪ್ರತಿಭಟನೆ

Views: 98

ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆ ಮಾಡಿರುವ ಘಟನೆ ಇಂದು ಇಲ್ಲಿನ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಶೆಡ್ವೊಂದರಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು, ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ.

ಈ ಬಗ್ಗೆ ವೈದ್ಯಕೀಯ ಪರೀಕ್ಷೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ಅಶೋಕನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, “ಮೃತ ಬಾಲಕಿಯ ಪೋಷಕರಿಂದ ದೂರು ಸ್ವೀಕರಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮೃತ ಬಾಲಕಿ ಕುಟುಂಬ ಕೊಪ್ಪಳ ಜಿಲ್ಲೆಯಿಂದ ಇಲ್ಲಿಗೆ ಬಂದಿದೆ. ಆಕೆಯ ತಾಯಿ ಮನೆಗೆಲಸ ಮತ್ತು ಬ್ಯೂಟಿ ಪಾರ್ಲರ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ತಂದೆ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಮನೆಗಳಲ್ಲಿ ಕೆಲಸಕ್ಕೆ ಹೋಗುವಾಗ ತಾಯಿ, ಬಾಲಕಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ತಾಯಿ ಅಕ್ಕಪಕ್ಕದ ಮನೆಯಲ್ಲಿ ಕೆಲಸ ಮಾಡುವಾಗ ಒಂದು ಮನೆಯಲ್ಲಿ ಮಗುವನ್ನು ಬಿಟ್ಟಿದ್ದರು” ಎನ್ನಲಾಗಿದೆ.

“ಬಳಿಕ ಅಪರಿಚಿತ ವ್ಯಕ್ತಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ. ಆ ಮನೆಯ ಮುಂಭಾಗ ಇರುವ ಶೆಡ್ವೊಂದರ ಶೌಚಾಲಯದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

“ಆರೋಪಿ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಯ ಗುರುತು ಪತ್ತೆಯಾದ ನಂತರ ಆತ ಎಲ್ಲಿದ್ದಾನೆ ಮತ್ತು ಇತರ ವಿವರಗಳನ್ನು ಪತ್ತೆ ಹಚ್ಚಬಹುದು. ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆದಿದೆಯೇ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಸಾವಿಗೆ ಕಾರಣ ಏನು ಮತ್ತು ಬಾಲಕಿಯ ಮೇಲೆ ದೌರ್ಜನ್ಯ ನಡೆದಿದೆಯೇ ಎಂಬ ತನಿಖೆ ನಡೆಸಲಾಗುತ್ತದೆ” ಎಂದು ತಿಳಿಸಿದರು.

 

Related Articles

Back to top button