“ನಮ್ಮನ್ನು ಪ್ರೀತಿಸಿದರು, ಆದರೆ ಕೊನೆಗೆ ಮದುವೆಯಾಗಿದ್ದು ಮಾತ್ರ ಮೋದಿಯವರನ್ನು”!…ಖರ್ಗೆ ನೀಡಿದ ‘ಲವ್ ಅಂಡ್ ಮ್ಯಾರೇಜ್’ ಉದಾಹರಣೆ
Views: 22
ಕನ್ನಡ ಕರಾವಳಿ ಸುದ್ದಿ: ರಾಜ್ಯಸಭೆಯಲ್ಲಿ ಬುಧವಾರ ನಡೆದ ನಿರ್ಗಮಿತ ಸದಸ್ಯರ ಬೀಳ್ಕೊಡುಗೆ ಸಮಾರಂಭವು ರಾಜಕೀಯ ಚರ್ಚೆಗಳ ಜೊತೆಗೆ ಹಾಸ್ಯ ಮತ್ತು ಆತ್ಮೀಯ ಕ್ಷಣಗಳಿಗೂ ಸಾಕ್ಷಿಯಾಯಿತು. ಈ ವೇಳೆ ಮಾತನಾಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ನೀಡಿದ ಒಂದು ಸ್ವಾರಸ್ಯಕರ ಹೇಳಿಕೆ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು.
ಖರ್ಗೆ ನೀಡಿದ ‘ಲವ್ ಅಂಡ್ ಮ್ಯಾರೇಜ್’ ಉದಾಹರಣೆ:
ಜೆಡಿಎಸ್ ಪಕ್ಷವು ಎನ್‌ಡಿಎ ಕೂಟವನ್ನು ಸೇರಿಕೊಂಡಿರುವುದನ್ನು ವ್ಯಂಗ್ಯವಾಗಿ ಉಲ್ಲೇಖಿಸಿದ ಖರ್ಗೆ, “ದೇವೇಗೌಡರನ್ನು ನಾನು ಕಳೆದ 54 ವರ್ಷಗಳಿಂದ ಬಲ್ಲೆ.ಅವರ ಜೊತೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ಆಮೇಲೆ ಏನಾಯಿತು ಎಂದು ಗೊತ್ತಿಲ್ಲ: ಅವರು ನಮ್ಮನ್ನು ಪ್ರೀತಿಸಿದರು, ಆದರೆ ಕೊನೆಗೆ ಮದುವೆಯಾಗಿದ್ದು ಮಾತ್ರ ಮೋದಿಯವರನ್ನು!” ಎಂದು ಹಾಸ್ಯ ಚಟಾಕಿ ಹಾರಿಸಿದರು.
ಖರ್ಗೆ ಅವರ ಈ ಚುಚ್ಚುಮಾತಿಗೆ ಸದನದಲ್ಲೇ ಇದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಗುಮುಖ ಬೀರಿದ್ದಾರೆ.
ಮಾತು ಮುಂದುವರಿಸಿದ ಖರ್ಗೆ, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ದೇಶಸೇವೆ ಮಾಡಲು ಯಾವುದೇ ನಿವೃತ್ತಿಯಿಲ್ಲ. ವಯಸ್ಸಾದಂತೆ ಅವರ ಉತ್ಸಾಹ ಕುಂದುವುದಿಲ್ಲ. ಸಮಾಜಕ್ಕಾಗಿ ದುಡಿಯುವ ಹಂಬಲ ಸದಾ ಇರುತ್ತದೆ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಹಿರಿಯ ನಾಯಕರಾದ ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರ ಸುದೀರ್ಘ ಸಂಸದೀಯ ಅನುಭವವನ್ನು ಶ್ಲಾಘಿಸಿದರು. “ಈ ನಾಯಕರು ತಮ್ಮ ಬದುಕಿನ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸದೀಯ ಕಾರ್ಯಗಳಲ್ಲಿ ಕಳೆದಿದ್ದಾರೆ. ಹೊಸದಾಗಿ ಆಯ್ಕೆಯಾಗಿ ಬಂದಿರುವ ಸಂಸದರು ಈ ಹಿರಿಯರಿಂದ ಕಲಿಯುವುದು ಬಹಳಷ್ಟಿದೆ” ಎಂದು ಪ್ರಧಾನಿ ಸಲಹೆ ನೀಡಿದರು.






