Views: 62
ಕನ್ನಡ ಕರಾವಳಿ ಸುದ್ದಿ:ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೋಟಿತೀರ್ಥ ಪುಷ್ಕರಣಿಯಲ್ಲಿ ಸಹಸ್ರಕಂಠ ಗಾಯನ, ದ್ವಿಸಹಸ್ರ ಪದನರ್ತನ, ತೆಪ್ಪೋತ್ಸವ , ಮಹಾಶಿವಗಂಗಾರತಿ ಸಹಸ್ರಾರತಿ ಹಾಗೂ ಗಾನಾಮೃತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಅನಾವರಣಗೊಳಿಸಲಾಯಿತು.

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೋಟಿತೀರ್ಥ ಪುಷ್ಕರಣಿಯಲ್ಲಿ ನಡೆಯುವ ಐತಿಹಾಸಿಕ ಮಹಾಶಿವಗಂಗಾರತಿ ಸಹಸ್ರಾರತಿ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಕೋಟಿತೀರ್ಥ ಪುಷ್ಕರಣಿಯ ಮಧ್ಯಭಾಗದಲ್ಲಿ 30 ಹಾಗೂ40 ಅಡಿಯ ವೇದಿಕೆ ನಿರ್ಮಾಣವಾಗಲಿದೆ. ಸುತ್ತಲೂ ಭಜನಾ ತಂಡಗಳಿಂದ ಸಹಸ್ರಕಂಠ ಗಾಯನ , ದ್ವಿಸಹಸ್ರ ಪದನರ್ತನ ಹಾಗೂ ಶ್ರೀ ಕೋಟಿಲಿಂಗೇಶ್ವರ ದೇವರ ತೆಪ್ಪೋತ್ಸವ, ಮಹಾಶಿವಗಂಗಾರತಿ- ಸಹಸ್ರಾರತಿ ಬೆಳಗುವವರಿಗೆ ಭಕ್ತರಿಗೆ ದೀಪ ಬೆಳಗಲು ಅವಕಾಶ ಕಲ್ಪಿಸಲಾಗುವುದು.
ಮಹಾಶಿವಗಂಗಾರತಿ ಸಹಸ್ರಾರತಿ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಶ್ರೀ ರಾಮ ಕೋಟೀಶ್ವರ ಕಲಾ ಸಂಘ, ಕೋಟೇಶ್ವರ ಇದರ ಗೌರವಾಧ್ಯಕ್ಷ ಹೆಚ್. ರಾಮಚಂದ್ರ ವರ್ಣ ಹಂಗಳೂರು ಹೇಳಿದರು.

ಶ್ರೀ ರಾಮ ಕೋಟೀಶ್ವರ ಕಲಾ ಸಂಘ ರಥಬೀದಿ ಕೋಟೇಶ್ವರ ಇವರ ಆಶ್ರಯದಲ್ಲಿ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಮತ್ತು ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರ ಪರಿಪೂರ್ಣ ಕೃಪಾಶೀರ್ವಾದಗಳೊಂದಿಗೆ ಮಹಾಶಿವರಾತ್ರಿಯ ಪ್ರಯುಕ್ತ ಫೆ.26 ಬುಧವಾರದಂದು ರಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೋಟಿತೀರ್ಥ ಪುಷ್ಕರಣಿಯಲ್ಲಿ ಸಹಸ್ರಕಂಠ ಗಾಯನ, ದ್ವಿಸಹಸ್ರ ಪದನರ್ತನ, ತೆಪ್ಪೋತ್ಸವ , ಮಹಾಶಿವಗಂಗಾರತಿ ಸಹಸ್ರಾರತಿ ಹಾಗೂ ಗಾನಾಮೃತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದರು.
ಶ್ರೀ ರಾಮ ಕೋಟೇಶ್ವರ ಕಲಾ ಸಂಘ, ಕೋಟೇಶ್ವರ ಇದರ ಅಧ್ಯಕ್ಷ ಬಿ.ಜಿ ಸೀತಾರಾಮ ಧನ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಸ್ರಕಂಠ ಗಾಯನದಲ್ಲಿ ಭಾಗವಹಿಸುವ ಭಜನಾ ಮಂಡಳಿಗಳು ಹಾಗೂ ಸಾರ್ವಜನಿಕರು ಮುಂಚಿತವಾಗಿ ನೋಂದಾವಣೆ ಮಾಡಿಕೊಳ್ಳಬೇಕು ಹಾಗೂ ಮಹಾ ಆರತಿಯಲ್ಲಿ ಭಾಗವಹಿಸುವವರು ನಿಗದಿತ ಶುಲ್ಕವನ್ನು ಮೊದಲೇ ಪಾವತಿ, ಸ್ಥಳ ಕಾಯ್ದಿರಿಸಿಕೊಳ್ಳುವ ಅವಕಾಶಗಳಿದ್ದು, ಸಾಂಪ್ರಾದಾಯಿಕ ಉಡುಗೆಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಹೇಳಿದರು.
ಕುಂದಾಪುರ ಮಹಾಕಾಳಿ ದೇವಸ್ಥಾನದ ಮಾಜಿ ಅಧ್ಯಕ್ಷ ಜಯಾನಂದ ಖಾರ್ವಿ ಕುಂದಾಪುರ ಅವರು ಮಾತನಾಡಿ, ಕೋಟಿ ತೀರ್ಥದಲ್ಲಿ ತೇಲುವ ಮಿತ್ರದಳ ವೇದಿಕೆಯಲ್ಲಿ ಪ್ರಸಿದ್ದ ಗಾಯಕರಾದ ಮೈಸೂರು ರಾಮಚಂದ್ರ ಆಚಾರ್ಯ ಅವರಿಂದ ಗಾನಾಮೃತ ನಡೆಯುವುದರಿಂದ ನುರಿತ ಮುಳುಗು ತಜ್ಷರ ತಂಡವು ದೋಣಿಗಳನ್ನು ಬಳಸಿ ಈ ವೇದಿಕೆಯನ್ನು ಸಿದ್ದಪಡಿಸಲಿದ್ದಾರೆ. ತೇಲುವ ಮಿತ್ರದಳ ವೇದಿಕೆಯ ಮೇಲೆ ಗಾನಾಮೃತ ನಡೆಯುತ್ತಿರುವಾಗಲೇ ನಿಧಾನವಾಗಿ ಪುಷ್ಕರಣಿಗೆ ಪ್ರದಕ್ಷಿಣಿ ಬರುತ್ತಿರುವಾಗ , ಪುಷ್ಕರಣಿ ಸುತ್ತಲೂ ಮೆಟ್ಟಲಿನ ಮೇಲೆ ನಿಂತಿರುವ ಭಜನಾ ತಂಡಗಳಿಂದ ಸಹಸ್ರಕಂಠ ಗಾಯನ ಹಾಗೂ ದ್ವಿಸಹಸ್ರ ಪದನರ್ತನ ನಡೆಯುತ್ತಿರುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪುಷ್ಕರಣಿ ಸುತ್ತಲೂ ತಡೆಬೇಲಿ ನಿರ್ಮಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೆಂಕಟಲಕ್ಷ್ಮೀ ಬಿಲ್ಡರ್‍ಸ್‌ನ ಮೆನೇಜಿಂಗ್ ಡೈರೆಕ್ಟರ್ ಚಂದ್ರಶೇಖರ ಐತಾಳ್ , ಮತೋದ್ಯಮಿ ಪುಂಡಲೀಕ ಬಂಗೇರ, ಪ್ರಧಾನ ಸಂಚಾಲಕ ರಮೇಶ್ ಪುತ್ರನ್, ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಶೆಟ್ಟಿ ಬೀಜಾಡಿ, ಬಾಬಣ್ಣ ಪೂಜಾರಿ ಹೆಬ್ರಿಮನೆ, ಬಿ.ಎಂ.ಗುರುರಾಜ್ ರಾವ್, ಸತ್ಯಮೂರ್ತಿ ಕೋಣಿ , ಬಸವರಾಜ್, ವಾದಿರಾಜ್ ಭಟ್, ಕಾರ್ಯದರ್ಶಿ ದಿನೇಶ್ ಹೆಚ್. ಸುವರ್ಣ ಚಾತ್ರಬೆಟ್ಟು , ಶಂಭು ಶೆಟ್ಟಿ ಗಾವಳಿ, ರಾಘವೇಂದ್ರ ಶೆಟ್ಟಿಗಾರ್, ಮಂಜುನಾಥ ಆಚಾರ್ಯ ಅರಸರಬೆಟ್ಟು, ಜಂಟಿ ಕಾರ್ಯದರ್ಶಿ ಸುಜಾತಾ ರಮೇಶ್, ರಮಾ ಬೋಳಾರ್ ಮಾರ್ಕೋಡು, ಖಜಾಂಚಿ ಪಿ. ಗಣಪಯ್ಯ ಚಡಗ, ಲಕ್ಷ್ಮಿನಾರಾಯಣ ಭಟ್, ಹೊದ್ರಾಳಿ, ಸುರೇಂದ್ರ ಸಂಗಮ್, ಬಸವ ಪೂಜಾರಿ, ಭಾಸ್ಕರ ಪೂಜಾರಿ ಹಳವಳ್ಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೇಶ್ ಹೆಚ್. ಸುವರ್ಣ ಚಾತ್ರಬೆಟ್ಟು ಸ್ವಾಗತಿಸಿ, ನಿವೃತ್ತ ಮೆಸ್ಕಾಂ ಅಧಿಕಾರಿ ಬಾಬಣ್ಣ ಪೂಜಾರಿ ನಿರೂಪಿಸಿ, ವಂದಿಸಿದರು.
—