ಮೆಟರ್ನಿಟಿ ಫೋಟೋ ಶೂಟ್ ವೇಳೆ ನೀರಿಗೆ ಬಿದ್ದು ತಾಯಿಯ 3 ವರ್ಷದ ಮೊದಲನೇ ಮಗು ಸಾವು
Views: 49
ಕನ್ನಡ ಕರಾವಳಿ ಸುದ್ದಿ: ಖಾಸಗಿ ರೆಸಾರ್ಟ್ ಒಂದರಲ್ಲಿ ತಾಯಿಯ ಮೆಟರ್ನಿಟಿ ಫೋಟೋಶೂಟ್ ನಡೆಯುತ್ತಿದ್ದಾಗ ಮೊದಲನೇ ಮಗು ನೀರಿಗೆ ಬಿದ್ದು ಮೃತಪಟ್ಟಿರುವ ದುರಂತ ಘಟನೆ ನೆಲಮಂಗಲದ ಸಮೀಪದ ಗಿಡೇನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀರ್(3) ಮೃತಪಟ್ಟ ಕಂದಮ್ಮ
ಲಕ್ಷ್ಮೀರ್ ಜೆ.ಪಿ. ನಗರ ನಿವಾಸಿ, ಸ್ವಾತಿ ಮತ್ತು ಚರಣ್ ರಾಜ್ ದಂಪತಿಯ ಮಗುವಾಗಿದ್ದು, ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್ ರಾಜ್ ವಿದೇಶಕ್ಕೆ ತೆರಳಿದ್ದರು. ಫೋಟೋ ಶೂಟ್ ಮಾಡಿಸುವುದಾಗಿ ಗಂಡನ ಬಳಿ ಹೇಳಿ ಸ್ವಾತಿ ಸ್ನೇಹಿತೆಯೊಂದಿಗೆ ಬಂದಿದ್ದರು.
ಎರಡನೇ ಮಗುವಿನ ಸಂತೋಷದಲ್ಲಿದ್ದ ತಾಯಿ ಫೋಟೋಶೂಟ್‌ನಲ್ಲಿ ಬ್ಯುಸಿಯಾಗಿದ್ದ ವೇಳೆ ಅವರ 3 ವರ್ಷದ ಮಗು ಆಟವಾಡುತ್ತಾ ಹತ್ತಿರದಲ್ಲಿದ್ದ ನೀರಿನ ಪೂಲ್‌ಗೆ ಬಿದ್ದಿದೆ. ಮಗು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಮಗುವಿನ ವಿಚಾರದಲ್ಲಿನ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.






