“ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ 90 ಲಕ್ಷ ರೂ. ಕೊಡದಿದ್ದರೆ ಕೊಲೆ” ಬೆದರಿಕೆ: ತನಿಖೆ ನಡೆಸಿದಾಗ ಆರೋಪಿ ಮಗನ ಸಹಿತ ಮೂವರ ಬಂಧನ
Views: 115
ಕನ್ನಡ ಕರಾವಳಿ ಸುದ್ದಿ : ಸ್ವಂತ ತಂದೆಯಿಂದ ಹಣ ಕೀಳಲು 40 ವರ್ಷದ ಮಗನೊಬ್ಬ ತಾನೇ ಅಪಹರಣದ ನಾಟಕವಾಡಿದ ಪ್ರಕರಣವನ್ನು ಆರ್.ಆರ್.ನಗರ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.
62 ವರ್ಷದ ಮನೋಹರ್ ಪಟೇಲ್ ಎಂಬುವವರು ನೀಡಿದ್ದ ದೂರಿನನ್ವಯ ತನಿಖೆ ನಡೆಸಿದಾಗ ಪುತ್ರನ ಸಂಚು ಬಯಲಾಗಿದೆ. ಅಪಹರಣದ ನಾಟಕವಾಡಿ, 90 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಮನೀಷ್ ಪಟೇಲ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗದಗದಲ್ಲಿ ಹಣದ ವ್ಯವಹಾರವಿದೆ ಎಂದು ತಂದೆಗೆ ತಿಳಿಸಿದ್ದ ಮನೀಷ್, ಸೆಪ್ಟೆಂಬರ್ 28ರಂದು ಮನೆಯಿಂದ ತೆರಳಿದ್ದ. ಆದರೆ, ಮಾರನೇ ದಿನ ಬೆಳಗ್ಗೆ 8 ಗಂಟೆಗೆ ಮನೀಷ್‌ನ ಮೊಬೈಲ್ ಸಂಖ್ಯೆಯಿಂದ ತಂದೆಗೆ ವಾಟ್ಸ್ಆ್ಯಪ್ ಕರೆ ಬಂದಿತ್ತು. ಫೋನ್‌ನಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಗಳು, “ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ, 90 ಲಕ್ಷ ರೂಪಾಯಿ ನೀಡದಿದ್ದರೆ ಮಗನನ್ನು ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದರು.
ನಾಲ್ಕೈದು ಬಾರಿ ಕರೆ ಮಾಡಿದ ಬಳಿಕ ಆರೋಪಿಗಳು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ಇದರಿಂದ ತೀವ್ರ ಆತಂಕಗೊಂಡ ಮನೋಹರ್ ಪಟೇಲ್ ಅದೇ ದಿನ ಮಧ್ಯಾಹ್ನ ಆರ್.ಆರ್.ನಗರ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಲು ಯತ್ನಿಸಿದಾಗ ಸ್ವಿಚ್ಡ್ ಆಫ್ ಎಂದು ಬಂದಿತ್ತು. ಆದರೆ, ಕೆಲ ಸಮಯದ ನಂತರ ಮತ್ತೆ ಅಪರಿಚಿತ ಸಂಖ್ಯೆಯಿಂದ ತಂದೆಗೆ ಕರೆ ಮಾಡಿ “ಹಣ ಅರೇಂಜ್ ಆಯ್ತಾ?” ಎಂದು ವಿಚಾರಿಸಿದ್ದರು. ತಕ್ಷಣ ಜಾಗೃತರಾದ ಪೊಲೀಸರು ಕರೆಯ ಸ್ಥಳವನ್ನು ಟ್ರ್ಯಾಕ್ ಮಾಡಿ ಹಾಸನದ ಭಾಗದಲ್ಲಿ ಹುಡುಕಾಟ ನಡೆಸಿದ್ದರು.
ಸ್ಥಳಕ್ಕೆ ತೆರಳಿ ಬಾಗಿಲು ತೆಗೆದು ನೋಡಿದಾಗ, ಮನೀಷ್ ಪಟೇಲ್ ಕಿಡ್ನ್ಯಾಪ್ ಮಾಡಿದವರು ಎನ್ನಲಾದ ಇಬ್ಬರು ವ್ಯಕ್ತಿಗಳ ಜೊತೆ ಯಾವುದೇ ಭಯವಿಲ್ಲದೇ ಜಾಲಿಯಾಗಿ ಕುಳಿತಿದ್ದ ದೃಶ್ಯ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸುದೀರ್ಘ ವಿಚಾರಣೆ ಬಳಿಕ ಇದು ತಂದೆಯಿಂದ 90 ಲಕ್ಷ ರೂಪಾಯಿ ಸುಲಿಗೆ ಮಾಡಲು ಹೆಣೆದಿದ್ದ ಕಟ್ಟುಕಥೆ ಎಂಬುದು ದೃಢಪಟ್ಟಿದೆ. ಮನೀಷ್ ಈ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಮೂವರು ಆರೋಪಿಗಳನ್ನ ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿರುವುದಾಗಿ” ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ತಿಳಿಸಿದ್ದಾರೆ.






