ಮಂಜಾ ದಾರಕ್ಕೆ ಸಿಲುಕಿ ಪರೀಕ್ಷೆಗೆ ಹೋಗಿದ್ದ ವಿದ್ಯಾರ್ಥಿ ದಾರುಣ ಅಂತ್ಯ
Views: 0
ಕನ್ನಡ ಕರಾವಳಿ ಸುದ್ದಿ: ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ಪರೀಕ್ಷೆಗೆ ಹೋಗಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಗಾಂಧಿ ನಗರದ ಬಳಿಯ ಪುಣಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೆಳಗಾವಿ ಮಹಾಂತೇಶ ನಗರದ ಧ್ರುವ ಸಂತೋಷ ಕಾರ್ಜನಿಗಿ (16) ಮೃತ ವಿದ್ಯಾರ್ಥಿ.
ಖಾಸಗಿ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಧ್ರುವ, ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಸಂಬಂಧಿಕರೊಬ್ಬರ ಬೈಕ್ ತೆಗೆದುಕೊಂಡು ಕಾಲೇಜಿಗೆ ಹೋಗಿದ್ದ. ಪರೀಕ್ಷೆ ಬರೆದು ಬೈಕ್ನಲ್ಲಿ ವಾಪಸ್ ಮನೆಗೆ ಬರುವಾಗ, ಕುತ್ತಿಗೆಗೆ ಮಾಂಜಾ ದಾರ ಸಿಕ್ಕಿದೆ. ಇದರಿಂದ ತೀವ್ರ ರಕ್ತಸ್ರಾವದಿಂದ ಬೈಕ್ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ.
ಹೀಗೆ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದ ಮಗ, ಮನೆಗೆ ಹೆಣವಾಗಿ ಮರಳಿರುವುದು ಕುಟುಂಬಸ್ಥರನ್ನು ಆಘಾತಗೊಳಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






