ಕೋಡಿಬೇಂಗ್ರೆ ಬೋಟ್ ದುರಂತ ಪ್ರಕರಣ: ಮೂವರು ಆರೋಪಿಗಳ ಬಂಧನ
Views: 159
ಕನ್ನಡ ಕರಾವಳಿ ಸುದ್ದಿ: ಕೋಡಿಬೇಂಗ್ರೆ ನದಿಯಲ್ಲಿ ನಡೆದ ಬೋಟ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಪರವಾನಗಿ ಇಲ್ಲದೆ ಬೋಟ್ ವಿಹಾರ ನಡೆಸಿ, ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಇಬ್ಬರು ಯುವತಿಯರು ಮತ್ತು ಒರ್ವ ಯುವಕನ ಸಾವಿಗೆ ಕಾರಣರಾದ ಆರೋಪದ ಮೇಲೆ ಸುಹಾಸ್ ಶ್ರೀಯಾನ್ (23), ಸೂಫಿಯಾನ್ (20) ಹಾಗೂ ವಾಸು ಮೆಂಡನ್ (52) ಅವರನ್ನು ದಸ್ತಗಿರಿ ಮಾಡಲಾಗಿದೆ.
“ದಿ ವೇವ್ ರೈಡರ್” ಎಂಬ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ದೋಣಿ ಚಾಲಕರು ಸೂಫಿಯಾನ್ ಮತ್ತು ವಾಸು ಅವರು ಅಜಾಗರೂಕ ಹಾಗೂ ನಿರ್ಲಕ್ಷ್ಯವಾಗಿ ದೋಣಿಯನ್ನು ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೋಣಿಯನ್ನು ಏಕಾಏಕಿ ಎಡಬದಿಗೆ ತಿರುಗಿಸಿದ ಪರಿಣಾಮ ಸಮತೋಲನ ಕಳೆದುಕೊಂಡ ದೋಣಿ ಉರುಳಿ ಬಿದ್ದಿದೆ.
ಪ್ರಕರಣದ ಕುರಿತು ಪ್ರಾರಂಭದಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ವೇಳೆ ಆರೋಪಿಗಳು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ದೋಣಿ ಸೇವೆ ನಡೆಸುತ್ತಿದ್ದರೆಂಬುದು ಹಾಗೂ ದೋಣಿಗೆ ಪ್ರವಾಸಿ ದೋಣಿ ಎಂದು ಘೋಷಿಸುವ ಯೋಗ್ಯ ಪ್ರಮಾಣಪತ್ರವಿಲ್ಲದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಅಪಘಾತಕ್ಕೆ ಕಾರಣವಾದ ದೋಣಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಯೋಗ್ಯವಾಗಿರಲಿಲ್ಲ ಎಂಬುದೂ ಪತ್ತೆಯಾಗಿದೆ. ಪ್ರಯಾಣಿಕರಿಗೆ ಜೀವರಕ್ಷಕ ಜಾಕೆಟ್ಗಳಂತಹ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.






