ಕೋಟ: ಗೂಗಲ್ ಮ್ಯಾಪ್ ನಂಬಿ ಕೊಲ್ಲೂರಿಗೆ ಹೊರಟಿದ್ದ ಕಾರೊಂದು ಆವೆ ಮಣ್ಣಿನ ಹೊಂಡಕ್ಕೆ!
Views: 104
ಕನ್ನಡ ಕರಾವಳಿ ಸುದ್ದಿ:ಗೂಗಲ್ ಮ್ಯಾಪ್ ನಂಬಿ ಕಾರೊಂದು ಆವೆ ಮಣ್ಣಿನ ಹೊಂಡಕ್ಕೆ ಬೀಳುವ ಸ್ಥಿತಿಗೆ ತಲುಪಿದ್ದು, ಶುಕ್ರವಾರ(ಫೆ.13) ರಾತ್ರಿ ಕೋಟ ಸಾಯಿಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಪಾಡಿಯಲ್ಲಿ ಬದಿಯಲ್ಲಿ ಸಂಭವಿಸಿದೆ.
ಕೇರಳ ಮೂಲದ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕಾಗಿ ಹೊರಟಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೇರವಾಗಿ ಸಂಚರಿಸುವ ಬದಲಿಗೆ ಗೂಗಲ್ ಮ್ಯಾಪ್‌ನಲ್ಲಿ ತೋರಿದ ಡೈವರ್ಶನ್ ಅನುಸರಿಸಿ ಬ್ರಹ್ಮಾವರ ಬಾರ್ಕೂರು ಮಾರ್ಗವಾಗಿ ಸಾಯಿಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು.
ಉಪ್ಪಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಬಳಿಕ ಹೊಳೆ ಬದಿಯ ಸಿಮೆಂಟ್ ಪಿಲ್ಲರ್ ಮೇಲೆ ಹತ್ತಿ ನಿಂತಿದೆ. ಆವೆ ಮಣ್ಣಿನ ಹೊಂಡಕ್ಕೆ ಕೇವಲ ಒಂದು ಅಡಿ ಅಂತರದಲ್ಲಿ ಕಾರು ನಿಂತಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ.
ಕಾರಿನಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಕೋಟ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






