BREAKING: ಧರ್ಮಸ್ಥಳ ಪ್ರಕರಣ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಇದೇ ಮೊದಲ ಪ್ರತಿಕ್ರಿಯೆ, ಹೇಳಿದ್ದೇನು?

Views: 339
ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ನಾನು ನೂರಾರು ಶವಗಳನ್ನು ಹೂತಿದ್ದೇನೆ. ಈಗ ಅವುಗಳ ಜಾಗವನ್ನೆಲ್ಲಾ ತೋರಿಸುತ್ತೇನೆ ಎಂದು ಅನಾಮಿಕ ವ್ಯಕ್ತಿ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ. ಈ ದೂರಿನ ಆಧಾರದ ಮೇಲೆ ಶವಗಳ ಬಗ್ಗೆ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿಯನ್ನೇ ರಚಿಸಿದೆ. ಎಸ್‌ಐಟಿಯು ಕಳೆದ 15 ದಿನದಿಂದ ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳನ್ನೆಲ್ಲಾ ಅಗೆದು ಶವಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಒಂದು ಅಸ್ಥಿಪಂಜರ ಮಾತ್ರ ಸಿಕ್ಕಿದೆ. ಮತ್ತೊಂದೆಡೆ ಕೆಲವು ಮೂಳೆಗಳು ಮಾತ್ರ ಸಿಕ್ಕಿವೆ. ಅನಾಮಿಕ ಹೇಳಿದಂತೆ ಹತ್ತಾರು, ನೂರಾರು ಶವಗಳ ಅಸ್ಥಿಪಂಜರಗಳು ಸಿಕ್ಕಿಲ್ಲ.
ಇದರ ಮಧ್ಯೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಹಿಂದೂ ಶ್ರದ್ದಾ ಕೇಂದ್ರಗಳ ಬಗ್ಗೆ ಸಮಾಜದಲ್ಲಿ ತಪ್ಪು ಭಾವನೆಯನ್ನು ಹರಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ವಿಧಾನಸಭೆಯಲ್ಲೂ ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ, ಅನಾಮಿಕನ ದೂರು ಬಗ್ಗೆ ಚರ್ಚೆಯಾಗಿದೆ.
ಇದರ ಮಧ್ಯೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಳೆದೊಂದು ತಿಂಗಳಿನಿಂದ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕವಾಗಿ ಮೌನಕ್ಕೆ ಶರಣಾಗಿದ್ದರು. ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ.
ಇದೇ ಮೊದಲ ಭಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಮ್ಮ ಮೌನ ಮುರಿದು ಈ ಎಲ್ಲ ವಿವಾದಗಳ ಬಗ್ಗೆ ಮಾತನಾಡಿದ್ದಾರೆ. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಆರೋಪ ಕೇಸ್ ಗೆ ಸಂಬಂಧಿಸಿದಂತೆ, ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಆರೋಪಗಳೆಲ್ಲಾ ಸುಳ್ಳು, ಹುಟ್ಟು ಹಾಕಿರುವವು ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ನನಗೆ ಇದರಿಂದ ತುಂಬಾ ನೋವು ಉಂಟಾಗಿದೆ. ಯಾರಿಗೂ ನನ್ನ ಮೇಲೆ, ಕ್ಷೇತ್ರದ ಮೇಲೆ ಯಾವ ಅನುಮಾನಗಳಿಲ್ಲ. ಭಕ್ತರು ಕೂಡ ಇದನ್ನೆಲ್ಲಾ ನೋಡಿ ನೋವು ಅನುಭವಿಸಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪಿಟಿಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ನನಗೆ ಮೂವರು ಸೋದರರು, ಓರ್ವ ಸೋದರಿ ಇದ್ದಾರೆ. ನನ್ನ 2ನೇ ಸೋದರ ಬೆಂಗಳೂರಿನಲ್ಲಿದ್ದು, ಶಿಕ್ಷಣ ಸಂಸ್ಥೆ ನೋಡಿಕೊಳ್ತಾರೆ. ಮೂರನೇ ಸೋದರ ಇಲ್ಲೇ ಧರ್ಮಸ್ಥಳದಲ್ಲೇ ಇದ್ದು, ಆಡಳಿತಾತ್ಮಕ ವಿಷಯ ನೋಡಿಕೊಳ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನಾನು ಧರ್ಮಸ್ಥಳದಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ನನ್ನ ಸೋದರ ಇಲ್ಲಿನ ಉಸ್ತುವಾರಿಯನ್ನೂ ವಹಿಸಿಕೊಳ್ತಾರೆ. ಪ್ರಮುಖವಾಗಿ ಅನ್ನ ಸಂತರ್ಪಣೆಯ ಬಗ್ಗೆ, ಸ್ವಚ್ಛತೆ, ಯಕ್ಷಗಾನ ಹೊಣೆಯನ್ನು ನಿಭಾಯಿಸುತ್ತಾರೆ. ಅವರ ಮೇಲೆ ಸಾಕಷ್ಟು ಜವಾಬ್ದಾರಿಗಳಿದ್ದು, ಎಲ್ಲಾ ನಿಭಾಯಿಸುತ್ತಾರೆ.
ಇನ್ನಿಬ್ಬರು, ಸ್ವತಂತ್ರವಾಗಿದ್ದಾರೆ. ನನ್ನ ಸೋದರಿ ಧಾರವಾಡದಲ್ಲಿದ್ದಾರೆ. ನನ್ನ ಬಾವ, ಧಾರವಾಡ ಮೆಡಿಕಲ್ ಕಾಲೇಜ್ ವಿವಿಯ ವೈಸ್ ಚಾನ್ಸಲರ್ ಆಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.
ನಾವು ಆರಂಭದಲ್ಲೇ ಎಸ್ಐಟಿಯನ್ನ ಸ್ವಾಗತ ಮಾಡಿದ್ದೇವೆ. ಈ ಜನರು ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದ್ದಾರೆ . ಅನುಮಾನ, ಗೊಂದಲಗಳನ್ನ ಭಕ್ತರಲ್ಲಿ ಹುಟ್ಟುಹಾಕಿದ್ದಾರೆ. ಸೂಕ್ತ ತನಿಖೆಯಿಂದ ಇದೆಲ್ಲವೂ ಬಗೆಹರಿದರೆ ಒಳ್ಳೆಯದು ಅಂತ ನಾನು ಭಾವಿಸಿದ್ದೇನೆ. ಸರ್ಕಾರ ತನಿಖಾ ತಂಡ ರಚಿಸಿ, ಇದಕ್ಕೆ ಪರಿಹಾರ ಕಂಡುಕೊಂಡ್ರೆ ಒಳ್ಳೆಯದೆಂಬ ಭಾವನೆ ಇತ್ತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇದೇ ಮೊದಲ ಭಾರಿಗೆ ಈ ಎಲ್ಲ ವಿವಾದಗಳ ಬಗ್ಗೆ ಬಹಿರಂಗವಾಗಿ ಮಾಧ್ಯಮದ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.