ಮೂಡುಬಿದಿರೆ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಡಿಜಿ-ಐಜಿಪಿ, ಗೃಹ ಸಚಿವರಿಗೆ ದೂರು
Views: 76
ಕನ್ನಡ ಕರಾವಳಿ ಸುದ್ದಿ: ಮೂಡುಬಿದಿರೆ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ. ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.
ಸದ್ಯ ಈ ಪ್ರಕರಣದಿಂದ ರಾಜ್ಯ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತೆ ಆಗಿದೆ. ಇನ್ಸ್‌ಪೆಕ್ಟರ್ ಕಿರುಕುಳದ ಬಗ್ಗೆ ಸಂತ್ರಸ್ತ ಮಹಿಳೆಯಿಂದ ಡಿಜಿ-ಐಜಿಪಿ, ಗೃಹ ಸಚಿವರು ಹಾಗೂ ಸಿಎಂ ಅವರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ
ಎರಡು ವರ್ಷದ ಹಿಂದೆ ಪ್ರಕರಣ ಒಂದರಲ್ಲಿ ನನ್ನ ಗಂಡನನ್ನು ಬಂಧಿಸಲಾಗಿತ್ತು. ಅವರನ್ನು ಬಿಡುಗಡೆಗೊಳಿಸಲು ಲೈಂಗಿಕವಾಗಿ ಸಹಕರಿಸಬೇಕು ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್‌ರೆಡ್ಡಿ ಅವರಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದ್ದು, ನಿಯಮಾನುಸಾರ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಂಡು ವರದಿ ನೀಡುವಂತೆ ಪತ್ರದಲ್ಲಿ ತಿಳಿಸಿದೆ.
ಜತೆಗೆ 25 ಲಕ್ಷ ರೂ. ಹಣ ನೀಡುವಂತೆಯೂ ಬೇಡಿಕೆ ಇಟ್ಟಿದ್ದರು. ಗಂಡನ ವಿರುದ್ಧ ರೌಡಿ ಶೀಟ್ ತೆರೆಯು ವುದಾಗಿಯೂ ಬೆದರಿಸಿದ್ದರು. ಹಣ ನೀಡಲು ಸಾಧ್ಯವಾಗದ ಮಹಿಳೆ, ಕೈಲಾದ 50 ಸಾವಿರ ರೂಪಾಯಿ ನೀಡಿ ಪತಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡಿಸಿಕೊಂಡಿದ್ದಾರೆ. ಆದರೆ, ನಂತರವೂ ಇನ್ಸ್‌ಪೆಕ್ಟರ್ ಕಾಟ ನಿಂತಿಲ್ಲ. ಪತಿಯು ಇನ್ಸ್‌ಪೆಕ್ಟರ್ ಕಿರುಕುಳ ತಾಳಲಾರದೆ ಊರು ಬಿಟ್ಟು ಹೋಗಿದ್ದಾರೆ. ಈಗ ಪತಿಯನ್ನು ಹುಡುಕುವ ನೆಪದಲ್ಲಿ ತನ್ನನ್ನು ಸ್ಟೇಷನ್‌ಗೆ ಅಥವಾ ತಾನು ಹೇಳಿದ ಕಡೆಗೆ ಬರುವಂತೆ ಇನ್ಸ್‌ಪೆಕ್ಟರ್ ಪೀಡಿಸುತ್ತಿದ್ದಾರೆ ಎಂದು ಮಹಿಳೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಇನ್ಸ್‌ಪೆಕ್ಟರ್ ವಿರುದ್ಧ ಬಂದ ದೂರುಗಳ ಆಧಾರದಲ್ಲಿ ಇಲಾಖೆ ತನಿಖೆ ಆರಂಭವಾಗಿದೆ. ಉತ್ತರ ಎಸಿಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದ್ದು, ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.






