ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ರಶ್ಮಿಕಾ ಮಂದಣ್ಣ ರೀತಿ ಡೀಪ್ ಫೇಕ್ ವೀಡಿಯೋ:ಯುವಕ ಸೆರೆ

Views: 0
ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಡೀಪ್ ಫೇಕ್ ಮೂಲಕ ಯಾರದೋ ನಗ್ನ ದೇಹಕ್ಕೆ ಯುವತಿಯ ಭಾವಚಿತ್ರ ಅಳವಡಿಸಿ ಬ್ಯ್ಲಾಕ್ಮೇಲ್ ಮಾಡಿದ ಖತರ್ನಾಕ್ ಯುವಕನೊಬ್ಬನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವೀಡಿಯೋ ಮಾಡಿದ್ದ ರೀತಿಯಲ್ಲೇ ಯುವತಿಯ ಫೋಟೋ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ರೀತಿ ಯಾರಿಗಾದರೂ ಆಗಿದ್ದರೆ ಮರೆಮಾಚದೆ ಪೊಲೀಸರಿಗೆ ದೂರು ಕೊಟ್ಟರೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆಳಗಾವಿ ಎಸ್ ಪಿ ಡಾ. ಭೀಮಶಂಕರ ಗುಳೇದ್ ತಿಳಿಸಿದರು.
ಯುವತಿಯಫೋಟೋ ಎಡಿಟ್ ಮಾಡಿ ಬ್ಯ್ಲಾಕ್ಮೇಲ್ ಮಾಡಿದ್ದ ಮಂಥನ್ ಪಾಟೀಲ್ (22) ಬಂಧಿತ ಆರೋಪಿಯಾಗಿದ್ದಾನೆ.ಯುವತಿ ಮತ್ತು ಆರೋಪಿ ಮಂಥನ್ ಪಾಟೀಲ್ ಒಂದೇ ಊರವನರಾಗಿದ್ದಾರೆ. ಮಂಥನ್ ಪಾಟೀಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಮಂಥನ್ ಪಾಟೀಲ್ ಯುವತಿಗೆ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದನು.
ಆದರೆ ಯುವತಿ ಈತನ ಪ್ರೀತಿಯನ್ನು ಒಪ್ಪಿರಲಿಲ್ಲ. ಹೀಗಾಗಿ ಆರೋಪಿ ಮಂಥನ್ ಪಾಟೀಲ್, ಸಾಮಾಜಿಕ ಜಾಲತಾಣದಿಂದ ಯುವತಿಯ ಫೋಟೋ ತೆಗೆದುಕೊಂಡು ನಗ್ನವಾಗಿ ಎಡಿಟ್ ಮಾಡಿ ವೈರಲ್ ಮಾಡುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಆದರೂ ಯುವತಿ ಪ್ರೀತಿ ಮಾಡಲು ಒಪ್ಪಿಲ್ಲ. ಯುವತಿಯ ಮೇಲೆ ಮತ್ತಷ್ಟು ಒತ್ತಡ ಹಾಕಲು ಆರೋಪಿ ಮಂಥನ್ ಪಾಟೀಲ್ ಯುವತಿ ಮತ್ತು ಆಕೆಯ ಗೆಳತಿಯರು ಒಟ್ಟಿಗೆ ಇರುವ ಭಾವಚಿತ್ರ ತೆಗೆದುಕೊಂಡು ಯಾರದ್ದೋ ನಗ್ನ ಭಾವಚಿತ್ರಕ್ಕೆ ಇವರ ಮುಖವನ್ನು ಅಳವಡಿಸಿದ್ದಾನೆ
ಬಳಿಕ ನಕಲಿ ಖಾತೆ ರಚಿಸಿ ಎಡಿಟ್ ಮಾಡಿದ್ದ ಯುವತಿಯರ ಭಾವಚಿತ್ರವನ್ನು ಅಪ್ಲೋಡ್ ಮಾಡುತ್ತಾನೆ. ಕೂಡಲೆ ಯುವತಿಯರು ಖಾನಾಪುರ ಪೊಲೀಸರಿಗೆ ದೂರು ನೀಡಿದ್ದು,ಅವರ ಕುಟುಂಬಸ್ಥರು ಪೊಲೀಸ್ ಠಾಣೆ ಎದುರು ಧರಣಿ ಕೂಡ ನಡೆಸಿದ್ದರು. ದೂರಿನನ್ವಯ ಖಾನಾಪುರ ಪೊಲೀಸರು ಆರೋಪಿ ಮಂಥನ್ ಪಾಟೀಲ್ನನ್ನು ಬಂಧಿಸಿದ್ದಾರೆ ಎಂದು ಎಸ್ ಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ದೇಶಾದ್ಯಂತ ಡೀಪ್ ಫೇಕ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳು ನಡೆದಾಗ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಗ ಇಂತಹ ಪ್ರಕರಣಗಳು ಮುಚ್ಚಿಹೋಗುತ್ತವೆ. ಆದರೆ ಬ್ಲ್ಯಾಕ್ಮೇಲ್ಗೆ ಒಳಗಾದ ಯುವತಿ ತನಗಾದ ಅನ್ಯಾಯಕ್ಕೆ ಧೈರ್ಯವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ಬೆಳಕಿಗೆ ಬಂದು ಆರೋಪಿಯನ್ನು ಬಂಧಿಸಲಾಗಿದೆ. ಯುವತಿಯ ಧೈರ್ಯಕ್ಕೆ ಜಿಲ್ಲಾ ಎಸ್ ಪಿ ಭೀಮಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆಗಳು ನಡೆದರೆ ಮುಜುಗರಕ್ಕೊಳಗಾಗದೆ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಅವರು ಮನವಿ ಮಾಡಿದ್ದಾರೆ.







