ಇತರೆ

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ 

Views: 1

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬುಧವಾರ ಇಲ್ಲಿನ ಶ್ರೀ ಕೃಷ್ಣಮಠದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ದ್ವೈವಾರ್ಷಿಕ ಪರ್ಯಾಯ ಪೂಜಾ ಕೈಂಕರ್ಯದ ಎರಡನೇ ವರ್ಷದ ಕೃಷ್ಣ ಜಯಂತಿ ಸಂಭ್ರಮ ಇದಾಗಿದ್ದು, ಶ್ರೀಗಳ ನೇತೃತ್ವದಲ್ಲಿ ಅಷ್ಟದಿನೋತ್ಸವವಾಗಿ ಕೃಷ್ಣ ಜಯಂತಿ ಆಚರಿಸಲಾಗುತ್ತಿದೆ.

ಶ್ರೀಮಠವನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿದ್ದು, ಸಹಸ್ರಾರು ಮಂದಿ ಭಕ್ತರು ಸರದಿಯ ಸಾಲಿನಲ್ಲಿ ಆಗಮಿಸಿ ಕೃಷ್ಣ ದರ್ಶನ ಪಡೆದರು. ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.

ಶ್ರೀಕೃಷ್ಣನನ್ನು ಬೆಣ್ಣೆ ಮೆಲ್ಲುವ ಅಲಂಕಾರ ಮಾಡಲಾಗಿತ್ತು. ಶ್ರೀಗಳಿಂದ ವಿಶೇಷ ಪೂಜೆ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನೆ, ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಠಣ ಇತ್ಯಾದಿ ನಡೆಯಿತು. ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸಲಾಗಿದ್ದು, ವಿವಿಧ ವಯೋಮಾನದ ಪುಟಾಣಿಗಳು ಭಾಗವಹಿಸಿದ್ದವು.

ಕೃಷ್ಣಾಷ್ಟಮಿ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ನಿರ್ಜಲ ಉಪವಾಸವಿದ್ದು, ಭಕ್ತಾದಿಗಳಿಗೆ ಭೋಜನ ಪ್ರಸಾದ ಇರಲಿಲ್ಲ. ರಾತ್ರಿ ಪೂಜೆ ಸಂದರ್ಭದಲ್ಲಿ ನೈವೇದ್ಯ ಸಮರ್ಪಣೆಗಾಗಿ ವಿವಿಧ ಉಂಡೆಗಳ ಸಿದ್ಧತೆಗಾಗಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉಂಡೆ ಕಟ್ಟಲು ಚಾಲನೆ ನೀಡಿದರು.

ಶ್ರೀಮಠದ ಆವರಣದಲ್ಲಿ ಮಡಿಕೆ ಒಡೆಯುವುದು, ರಂಗವಲ್ಲಿ, ಹೂಕಟ್ಟುವುದು, ಮೊಸರು ಕಡಿಯುವುದು ಇತ್ಯಾದಿ ಸ್ಪರ್ಧೆಗಳು ನಡೆದವು. ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ತುಂಬೆಲ್ಲ ವಿವಿಧ ವೇಷಗಳು, ಹುಲಿವೇಷ ಇತ್ಯಾದಿಗಳಿಂದಾಗಿ ಉಡುಪಿಗೆ ಉಡುಪಿಯೇ ಅಷ್ಟಮಿ ಸಂಭ್ರಮದಲ್ಲಿ ಮಿಂದೆದ್ದಂತಿತ್ತು.

Related Articles

Back to top button
error: Content is protected !!