ಮದುವೆಯಾಗುವುದಾಗಿ ದೈಹಿಕ ಸಂಬಂಧ ಬೆಳೆಸಿ, ಬಳಿಕ ಮದುವೆ ನಿರಾಕರಿಸಿದರೆ ವಂಚನೆ ಅಲ್ಲ: ಹೈಕೋರ್ಟ್
Views: 179
ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ಸುದೀರ್ಘ ಕಾಲದವರೆಗೆ ದೈಹಿಕ ಸಂಬಂಧ ಬೆಳೆಸಿ. ಬಳಿಕ ಮದುವೆ ನಿರಾಕರಿಸಿದರೆ ಅದನ್ನು ‘ಮದುವೆಯ ಸುಳ್ಳು ಭರವಸೆ’ ನೀಡಿ ಮಾಡಿದ ವಂಚನೆ ಎಂದು ಪರಿಗಣಿಲಾಗುವುದಿಲ್ಲ. ಹಾಗೆಯೇ ಪ್ರೀತಿಯ ಸಂಬಂಧವು ಬಳಿಕದ ದಿನಗಳಲ್ಲಿ ಜಾತಿ ತಾರತಮ್ಯದಂತಹ ಕಾರಣಗಳಿಂದ ಮುರಿದುಬಿದ್ದರೆ ಅದನ್ನು ವಂಚನೆ ಎನ್ನಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೀದರ್ ಮೂಲದ ವೈದ್ಯ ಡಾ। ರಾಮದಾಸ್ ಪಾಟೀಲ್ ಅರ್ಜಿ ದಾರರ ವಿರುದ್ದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಇಬ್ಬರೂ ವಯಸ್ಕರಾಗಿದ್ದು, ಸುಮಾರು 7 ವರ್ಷ ಪರಸ್ಪರ ಒಪ್ಪಿಗೆಯಿಂದ ಒಡನಾಟ ಹೊಂದಿದ್ದರು. ಕೇವಲ ಮದುವೆ ಮುರಿದುಬಿದ್ದ ಮಾತ್ರಕ್ಕೆ ಅದನ್ನು ಆರಂಭದಿಂದಲೂ ವಂಚಿಸುವ ದುರುದ್ದೇಶವಿತ್ತು ಎನ್ನಲಾಗದು ಎಂದು ನ್ಯಾಯಾಲಯ ಹೇಳಿದೆ.
ದೀರ್ಘಕಾಲದ ಪರಸ್ಪರ ಒಪ್ಪಿಗೆಯ ಸಂಬಂಧಗಳು ಕಹಿ ಅಂತ್ಯ ಕಂಡಾಗ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69 (ಮದುವೆ ಆಗುವ ಉದ್ದೇಶವಿಲ್ಲದಿದ್ದರೂ ಮದುವೆ ಆಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ) ಅನ್ನು ಅಸ್ತ್ರವನ್ನಾಗಿ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?
ಅರ್ಜಿದಾರರು ಮತ್ತು ದೂರುದಾರರು ವೈದ್ಯರಾಗಿದ್ದು, ಮಂಗಳೂರಿನ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿದ್ದರು. ಆರೋಪಿತರಾದ ಅರ್ಜಿದಾರರಿಗೆ 2017ರಲ್ಲಿ ಬೀದರ್ ನಲ್ಲಿ ಸ್ನೇಹಿತರ ಮೂಲಕ ದೂರುದಾರೆಯ ಪರಿಚಯವಾಗಿತ್ತು. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಬೆಳೆದು ಬಳಿಕ ಅದು ಪ್ರೇಮ ಸಂಬಂಧವಾಗಿ 2019ರ ವರೆಗೂ ಮುಂದುವರಿದಿತ್ತು. 2017 ರಿಂದ 2023 ರ ವರೆಗೂ ಇಬ್ಬರ ನಡುವೆ ದೈಹಿಕ ಸಂಬಂಧವೂ ಇತ್ತು. ಆದರೆ ದೂರುದಾರೆ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅಲ್ಲದೆ, ಆರೋಪಿ ಬೇರೆ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ 2025 ರಲ್ಲಿ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ದೋಷಾರೋಪ ಪಟ್ಟಿಸಲ್ಲಿಸಿದ್ದರು.






