ಸಾಮಾಜಿಕ

ವರ ನೀಡಿದ್ದ ಚಿನ್ನಾಭರಣ, ದುಬಾರಿ ಉಡುಗೊರೆಗಳೊಂದಿಗೆ ಪ್ರಿಯಕರನ ಜೊತೆ ಬೆಳಗಿನ ಜಾವ ಮದುಮಗಳು ಪರಾರಿ 

Views: 438

ಕನ್ನಡ ಕರಾವಳಿ ಸುದ್ದಿ: ನಿಕಾಹ್ ಮುಗಿಸಿ ಮದುವೆ ಔತಣಕೂಟಕ್ಕೆ ಸಜ್ಜಾಗಿದ್ದ ಮದುಮಗಳು, ವರ ನೀಡಿದ್ದ ಚಿನ್ನಾಭರಣ ಹಾಗೂ ದುಬಾರಿ ಉಡುಗೊರೆಗಳೊಂದಿಗೆ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಬಿ.ಸಿ. ರೋಡಿನ ಪಲ್ಲಮಜಲಿನಲ್ಲಿ ನಡೆದಿದೆ.

ಡಿಸೆಂಬರ್ 12 ರಂದು ಈ ಜೋಡಿಯ ನಿಕಾಹ್ ಶಾಸ್ತೋಕ್ತವಾಗಿ ನೆರವೇರಿತ್ತು. ಡಿಸೆಂಬರ್ 14 ರಂದು ಮಂಗಳೂರಿನ ತೊಕ್ಕೊಟ್ಟು ಯುನಿಟಿ ಹಾಲ್‌ನಲ್ಲಿ ಅದ್ಧೂರಿ ಮದುವೆ ಸಮಾರಂಭ ಮತ್ತು ಔತಣಕೂಟ ನಡೆಯಬೇಕಿತ್ತು. ಮನೆಯವರೆಲ್ಲರೂ ಸಂಭ್ರಮದ ಸಿದ್ಧತೆಯಲ್ಲಿದ್ದಾಗಲೇ ಮದುಮಗಳು ಶಾಕ್ ನೀಡಿದ್ದಾಳೆ.

ಪರಾರಿಯಾದ ಯುವತಿ ತನ್ನೊಂದಿಗೆ ವರನ ಕಡೆಯಿಂದ ಬಂದಿದ್ದ ಉಡುಗೊರೆಗಳನ್ನು ಹೊತ್ತೊಯ್ದಿದ್ದಾಳೆ ಎನ್ನಲಾಗಿದೆ.

ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ಮನೆಯವರೆಲ್ಲರೂ ನಿದ್ರೆಯಲ್ಲಿದ್ದಾಗ ಯುವತಿ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ವಧು ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ಆಘಾತಕ್ಕೆ ದೂಡಿದೆ.

ಈ ಕುರಿತು ವರನ ಕಡೆಯವರು ಮಂಗಳೂರಿನ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related Articles

Back to top button