ಪ್ರಧಾನಿ ನರೇಂದ್ರ ಮೋದಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ: ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ
Views: 171
ಕನ್ನಡ ಕರಾವಳಿ ಸುದ್ದಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಠದ ಆವರಣದಲ್ಲಿರುವ ಸ್ವರ್ಣ ಲೇಪಿತ ನೂತನ ತೀರ್ಥ ಮಂಟಪವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಪುತ್ತಿಗೆ ಸ್ವಾಮೀಜಿಗಳ ಸನ್ಯಾಸ ಜೀವನದ ಸ್ವರ್ಣ ಮಹೋತ್ಸವದ ನೆನಪಿಗಾಗಿ ಮಂಟಪಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಬಳಿಕ ಮೋದಿ ಮಠಾಧೀಶರೊಂದಿಗೆ ಸಂವಾದ ನಡೆಸಿದ್ದು, ಶ್ರೀಕೃಷ್ಣನ ಪ್ರಸಾದ ಸ್ವೀಕರಿಸಿದ ಪ್ರಧಾನಿ, ಅಚಾರ್ಯ ಮಧ್ವರ ಸರ್ವಜ್ಞ ಪೀಠ ಹಾಗೂ ಮಠದ ವಿವಿಧ ದೇವಾಲಯಗಳ ದರ್ಶನ ಮಾಡಿದರು.
ನಂತರ ಗೀತಾ ಮಂದಿರಕ್ಕೆ ತೆರಳಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆಯನ್ನು ಅನಾವರಣಗೊಳಿಸಿ ಧ್ಯಾನ ಮಂದಿರವನ್ನು ವೀಕ್ಷಿಸಿದರು. ಅಲ್ಲಿಂದ ಅವರು ಲಕ್ಷಕಂಠ ಭಗವದ್ಗೀತಾ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಸಹಸ್ರಾರು ಭಕ್ತರೊಂದಿಗೆ ಗೀತಾ ಪಾರಾಯಣದಲ್ಲಿ ಭಾಗಿಯಾದರು.
ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಿದರು. ಶ್ರೀಕೃಷ್ಣ, ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಮಾಡಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪ್ರಧಾನಿ ಅವರನ್ನು ಪೂರ್ಣಕುಂಭಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು, ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಪಠಿಸಲಿದ್ದಾರೆ.
ಶ್ಲೋಕಗಳ ಪಾರಾಯಣದ ಬಳಿಕ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮೋದಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಮೋದಿಯವರು ಕೋಟಿ ಗೀತಾ ಲೇಖನ ಯಜ್ಜದ ದೀಕ್ಷೆಯನ್ನೂ ಪಡೆಯಲಿದ್ದಾರೆ.
ಉಡುಪಿಯ ಆದಿ ಉಡುಪಿ ಹೆಲಿಪ್ಯಾಡ್ನಲ್ಲಿ ಮೋದಿ ಅವರನ್ನು ರಾಜ್ಯಪಾಲ ಥಾವರ್ಚಂದ್ ಗೆಹೋಟ್, ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸ್ಥಳೀಯ ಅಧಿಕಾರಿಗಳು ಬರಮಾಡಿಕೊಂಡರು.






