ಇತರೆ

ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನ ಹತ್ಯೆ: ಆ್ಯಸಿಡ್ ಸುರಿದು ವಿಕೃತಗೊಳಿಸಿ ಪರಾರಿಯಾದ ಮಹಿಳೆ ಅರೆಸ್ಟ್ 

Views: 20

ಕನ್ನಡ ಕರಾವಳಿ ಸುದ್ದಿ:ಅನೈತಿಕ ಸಂಬಂಧ ಹಾಗೂ ಖಾಸಗಿ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಹಿಳೆಯೊಬ್ಬಳು ತನ್ನ ಕುಟುಂಬಸ್ಥರೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಅಜಂಗಢ ನಿವಾಸಿ ಪಂಕಜ್ ಗುಪ್ತಾ ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಪಂಕಜ್ ಗುಪ್ತಾ ನೆರೆಯ ಹಳ್ಳಿಯ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು.

ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ದೂರವಾಗಿದ್ದರು. ಆದರೆ, ಪಂಕಜ್ ಬಳಿ ಮಹಿಳೆಯ ಖಾಸಗಿ ವಿಡಿಯೋಗಳಿದ್ದವು ಎನ್ನಲಾಗಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಆತ, ಹಣ ನೀಡುವಂತೆ ಮತ್ತು ದೈಹಿಕವಾಗಿ ಸಹಕರಿಸುವಂತೆ ಮಹಿಳೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಪಂಕಜ್‌ನ ಕಾಟ ತಾಳಲಾರದೆ ಮಹಿಳೆ, ತನ್ನ ಸಹೋದರ ಹಾಗೂ ಅತ್ತಿಗೆಯ ಬಳಿ ವಿಷಯ ತಿಳಿಸಿ ಹತ್ಯೆಗೆ ಸಂಚು ರೂಪಿಸಿದ್ದಾಳೆ.

ಆ್ಯಸಿಡ್ ಸುರಿದು ವಿಕೃತಿ:ಪೂರ್ವನಿಯೋಜಿತ ಸಂಚಿನಂತೆ ಫೆಬ್ರವರಿ 7ರಂದು ಪಂಕಜ್‌ನನ್ನು ಉಪಾಯವಾಗಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡ ಆರೋಪಿಗಳು, ಅಲ್ಲಿ ಆತನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಕೃತ್ಯದ ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಶವದ ಮುಖದ ಮೇಲೆ ಆ್ಯಸಿಡ್ ಸುರಿದು ವಿಕೃತಗೊಳಿಸಿ ಪರಾರಿಯಾಗಿದ್ದರು.

ನಿರ್ಜನ ಪ್ರದೇಶದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಮೃತ ವ್ಯಕ್ತಿಯ ಮೊಬೈಲ್‌ ಕರೆಗಳ ವಿವರ  ಪರಿಶೀಲಿಸಿದಾಗ ಮಹಿಳೆಯ ಸುಳಿವು ಸಿಕ್ಕಿದೆ. ಆಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ತಾನೇ ತನ್ನ ಕುಟುಂಬದವರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ತಪ್ರೊಪ್ಪಿಕೊಂಡಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹಿಳೆ ಹಾಗೂ ಮತ್ತೊಬ್ಬನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

Related Articles

Back to top button
error: Content is protected !!