ಮದುವೆ ವೇದಿಕೆಯಲ್ಲಿಯೇ ವರನಿಗೆ ಚಾಕು ಇರಿತ; ಪರಾರಿಯಾಗುತ್ತಿದ್ದ ಆರೋಪಿಯನ್ನು 2 ಕಿಮೀ ವರೆಗೆ ಬೆನ್ನಟ್ಟಿದ ಡ್ರೋನ್
Views: 209
ಕನ್ನಡ ಕರಾವಳಿ ಸುದ್ದಿ:ಮದುವೆ ಮಂಟಪದಲ್ಲಿ ವರನಿಗೆ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ವೆಡ್ಡಿಂಗ್ ಡ್ರೋನ್ 2 ಕಿ.ಮೀ ವರೆಗೆ ಬೆನ್ನಟ್ಟಿದ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರನಿಗೆ ವೇದಿಕೆಯಲ್ಲಿಯೇ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಸಂಭ್ರಮ ತುಂಬಿರಬೇಕಿದ್ದ ಮದುವೆ ಮಂಟಪದಲ್ಲಿ ಆತಂಕ ನಿರ್ಮಾಣವಾಯಿತು.
ತಕ್ಷಣ ವರನನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಮದುವೆಯ ಸಂಭ್ರಮವನ್ನು ಕವರ್ ಮಾಡುತ್ತಿದ್ದ ಡ್ರೋನ್ ಕ್ಯಾಮೆರಾ ಬೈಕ್ನಲ್ಲಿ ಪರಾರಿಯಾಗುತ್ತಿದ್ದ ಆ ಇಬ್ಬರು ದಾಳಿಕೋರರನ್ನು 2 ಕಿ.ಮೀ. ವರೆಗೆ ಬೆನ್ನಟ್ಟಿದೆ. ಆ ಡ್ರೋನ್ ಕ್ಯಾಮೆರಾದಿಂದಾಗಿ ಚಾಕುವಿನಿಂದ ಹಲ್ಲೆ ನಡೆಸಿದವರು ಸಿಕ್ಕಿಬಿದ್ದಿದ್ದಾರೆ.
22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಸಮಾರಂಭದ ಸಂದರ್ಭದಲ್ಲಿ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ರಾಘೋ ಜಿತೇಂದ್ರ ಬಕ್ಷಿ ಎಂಬ ಆರೋಪಿ ವೇದಿಕೆಯಲ್ಲಿ ವರನ ಬಳಿಗೆ ಬಂದು ಚಾಕುವಿನಿಂದ ಮೂರು ಬಾರಿ ಇರಿದು, ಅವನ ತೊಡೆ ಮತ್ತು ಮೊಣಕಾಲಿಗೆ ಗಾಯಗೊಳಿಸಿದ್ದಾನೆ. ಈ ವೇಳೆ ಮದುವೆಗೆ ಕರೆಸಲಾಗಿದ್ದ ಕ್ಯಾಮೆರಾಮನ್ ತನ್ನ ಡ್ರೋನ್ ಕ್ಯಾಮೆರಾದಲ್ಲಿ ಈ ಘಟನೆಯ ಪೂರ್ತಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ನಂತರ ಆ ದಾಳಿಕೋರರು ಹೋದ ದಿಕ್ಕಿನಲ್ಲಿ 2 ಕಿ.ಮೀವರೆಗೆ ಅವರನ್ನು ಡ್ರೋನ್ ಕ್ಯಾಮೆರಾದ ಮೂಲಕ ಫಾಲೋ ಮಾಡಿದ್ದಾರೆ. ಇದರಿಂದ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು.






