ಮದುವೆಯಾದ ಗಂಡನನ್ನೇ ಮುಗಿಸಲು ಹತ್ಯೆಯ ಸಂಚು ಬಯಲು! ಪೊಲೀಸರಿಗೆ ಶರಣಾದ ಪತ್ನಿ
Views: 201
ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಗಂಡನನ್ನೇ ಮುಗಿಸಲು ಹತ್ಯೆಯ ಸಂಚು ಬಯಲಾಗಿ ಪ್ಲಾನ್ ಫೇಲ್ ಆಗಿ ಪತ್ನಿ ಪೊಲೀಸರಿಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
ಸಂಗೀತಾ ಗಂಡನ ಮುಗಿಸಲು ಪ್ಲಾನ್ ಮಾಡಿದ ಆರೋಪಿ. ಈಕೆ ಪತಿಯ ಜೀವ ತೆಗೆಯಲು ಸಹೋದರರನ್ನೇ ಬಳಸಿಕೊಂಡಿರುವ ಆರೋಪದ ಮೇರೆಗೆ ಪ್ರಕರಣ ಸಂಬಂಧ ಈಕೆಯ ಸಹೋದರ ಸಂಜಯ್, ಸಹೋದರನ ಸ್ನೇಹಿತ ವಿಘ್ನೇಶ್ ಹಾಗೂ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.
ಸಂಗೀತಾ, ರಾಜೇಂದ್ರ ಎಂಬಾತನ ಮದುವೆ ಆಗಿದ್ದಳು. ಇಬ್ಬರ ಸಂಸಾರ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಕೆಲವು ತಿಂಗಳುಗಳಿಂದ ಕೌಟುಂಬಿಕ ಕಲಹ ಉಂಟಾಗಿತ್ತು. ಅದೇ ಕಾರಣಕ್ಕೆ ಸಂಗೀತಾ ಗಂಡನ ಮುಗಿಸಲು ಪ್ಲಾನ್ ಮಾಡಿದ್ದಾಳೆ. ಸಹೋದರನ ಜೊತೆ ಸೇರಿಕೊಂಡು ದರೋಡೆ ಪ್ಲಾನ್ ರೂಪಿಸಿ ಹತ್ಯೆ ಮಾಡಲು ನಿರ್ಧರಿಸಿದ್ದಳು. ಅದರಂತೆ ಅಕ್ಟೋಬರ್ 25 ರಂದು ರಾಜೇಂದ್ರ- ಸಂಗೀತಾ ಸ್ಕೂಟರ್ನಲ್ಲಿ ತೆರಳುತ್ತಿದ್ದರು.
ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗಲೇ ಪ್ಲಾನ್ ಪ್ರಕಾರವೇ ದರೋಡೆ ಗ್ಯಾಂಗ್ ಎಂಟ್ರಿಯಾಗಿತ್ತು. ಸಂಗೀತಾಳ ಚಿನ್ನದ ಸರ ಕಸಿಯಲು ಪ್ರಯತ್ನಿಸುತ್ತಾರೆ. ಅದನ್ನು ತಡೆಯಲು ರಾಜೇಂದ್ರ ಮುಂದೆ ಬಂದಿದ್ದಾನೆ. ಆಗ ರಾಜೇಂದ್ರನಿಗೆ ಡ್ರ್ಯಾಗರ್ ನಿಂದ ಓರ್ವ ಇರಿದಿದ್ದಾನೆ. ಅಷ್ಟೊತ್ತಿಗೆ ಬೇರೊಂದು ವಾಹನ ಬರುವ ಸದ್ದು ಕೇಳಿದೆ. ಗಾಬರಿಯಾದ ದರೋಡೆ ಗ್ಯಾಂಗ್ ಅಲ್ಲಿಂದ ಪರಾರಿ ಆಗಿತ್ತು.
ಘಟನೆಯ ನಂತರ ರಾಜೇಂದ್ರ ನಂಜನಗೂಡು ಪೊಲೀಸರಿಗೆ ಮಾಹಿತಿ ನೀಡಿದ್ದ. ಪ್ರಕರಣವನ್ನು ಸಮಗ್ರವಾಗಿ ತನಿಖೆ ಮಾಡಿದಾಗ ಪೊಲೀಸರಿಗೆ ಒಂದಷ್ಟು ಅನುಮಾನ ಬಂದಿದೆ. ಕೊನೆಗೆ ತಮ್ಮದೇ ಶೈಲಿಯಲ್ಲಿ ಸಂಗೀತಾಳನ್ನು ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ.






