ಸಾಮಾಜಿಕ

ವಿಚ್ಚೇದನಕ್ಕೆ ಸಿದ್ಧತೆಯಲ್ಲಿರುವಾಗ ಪತ್ನಿಯನ್ನು ಹತ್ಯೆಗೈದ ಪತಿ

Views: 116

ಕನ್ನಡ ಕರಾವಳಿ ಸುದ್ದಿ: ವಿಚ್ಛೇದನಕ್ಕೆ ಸಿದ್ದತೆಯಲ್ಲಿರುವಾಗಲೇ  ಪತ್ನಿಯನ್ನು ಚಾಕುವಿನಿಂದ ಇರಿದು ಪತಿ ಹತ್ಯೆಗೈದಿರುವ ಘಟನೆ ಆಲ್ಲೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಹವ್ವಳ್ಳಿ ಗ್ರಾಮದ ನೇತ್ರಾವತಿ (34) ಕೊಲೆಯಾದ ಮಹಿಳೆ. ಅವರ ಪತಿ ನವೀನ್ ಕೊಲೆ ಆರೋಪಿ.

ಸಕಲೇಶಪುರದ ನವೀನ್ ಜೊತೆ ಐದು ತಿಂಗಳ ಹಿಂದೆ ನೇತ್ರಾವತಿಯ ವಿವಾಹ ನಡೆದಿತ್ತು. ಆದರೆ, ಮದುವೆಯಾದ ಕೆಲ ದಿನಗಳಲ್ಲಿ ಪತಿಯಿಂದ ದೂರವಾದ ನೇತ್ರಾವತಿ ತವರು ಮನೆ ಸೇರಿದ್ದರು. ಹಿರಿಯರು ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ನೇತ್ರಾವತಿ ವಿಚ್ಚೇದನ ನೀಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಈ ಮಧ್ಯೆ ಮೂರು ದಿನಗಳ ಹಿಂದೆ ಆಲ್ಲೂರು ಪೊಲೀಸ್ ಠಾಣೆಯಲ್ಲಿ ಪತಿ ನವೀನ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಪೊಲೀಸರು ದೂರು ಸ್ವೀಕರಿಸಿದ್ದರು.

ವಿಚ್ಚೇದನಕ್ಕೆ ಸಿದ್ಧತೆ ಮತ್ತು ಪೊಲೀಸರಿಗೆ ದೂರು ನೀಡಿದ್ದರಿಂದ ಕೆರಳಿದ ನವೀನ್‌ ಪತ್ನಿ ನೇತ್ರಾವತಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದಿದ್ದಾನೆ. ಗಂಭೀರ ಗಾಯಗೊಂಡಿದ್ದ ನೇತ್ರಾವತಿ ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button