‘ಜಾತಿ ಗಣತಿ’ ಸಮೀಕ್ಷೆಗೆ ಹಾಜರಾಗದ ಉಡುಪಿ ತಾಲೂಕಿನ ಮೂವರು ಶಿಕ್ಷಕಿಯರ ಅಮಾನತು

Views: 493
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ವತಿಯಿಂದ ನಡೆದಿರುವ ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರಾಗಿ ನಿಯುಕ್ತಿಗೊಂಡಿದ್ದ ಮೂವರು ಶಿಕ್ಷಕಿಯರನ್ನು ಗಣತಿಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಅ.4ರಂದು ಅಮಾನತಿನಲ್ಲಿರಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಉಡುಪಿ ತಾಲೂಕಿನ ಒಳಕಾಡು ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಸುರೇಖ ಹಾಗೂ ರತ್ನ ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕಿ ಪ್ರಭಾ ಬಿ ಇವರನ್ನು ಗಣತಿದಾರರಾಗಿ ನೇಮಿಸಲಾಗಿದ್ದು, ಈ ಶಿಕ್ಷಕರು ನೇಮಕಾತಿ ಆದೇಶವನ್ನು ಸ್ವೀಕರಿಸದೇ, ದೂರವಾಣಿ ಮೂಲಕ ಸಂಪರ್ಕಿಸಿ ದರೂ ಆದೇಶ ಪ್ರತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು.
ಈ ಮೂವರು ಶಿಕ್ಷಕಿಯರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರೂ ಈವರೆಗೆ ಸಮಜಾಯಿಷಿ ನೀಡಿಲ್ಲದ ಕಾರಣ ಮೂವರು ಸಮೀಕ್ಷೆದಾರರನ್ನು ಅ.4ರಂದು ಅಮಾನತ್ತಿನಲ್ಲಿರಿಸಿ ಆದೇಶಿಸಲಾಗಿದೆ.
ಇದೇ ರೀತಿ ಸಮೀಕ್ಷೆ ಕಾರ್ಯದಲ್ಲಿ ಯಾವುದೇ ಸಮೀಕ್ಷೆದಾರರು ನಿರ್ಲಕ್ಷ್ಯ ತೋರಿದರೆ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಎಚ್ಚರಿಕೆ ನೀಡಿದ್ದಾರೆ.