ಪೂಜೆ ಮಾಡುವಾಗ ಮನೆಯವರ ಗಮನ ಬೇರೆಡೆ ಸೆಳೆದು ದೇವರ ಮೇಲಿದ್ದ ಆಭರಣ ಕದ್ದು ಪರಾರಿಯಾಗಿದ್ದ ಅರ್ಚಕನ ಬಂಧನ

Views: 93
ಕನ್ನಡ ಕರಾವಳಿ ಸುದ್ದಿ: ವರಮಹಾಲಕ್ಷ್ಮೀ ಪೂಜೆ ದಿನವೇ ಸತ್ಯನಾರಾಯಣ ಪೂಜೆ ಮಾಡುವಾಗ ದೇವರ ಮೇಲಿದ್ದ ಆಭರಣ ಕದ್ದು ಪರಾರಿಯಾಗಿದ್ದ ಅರ್ಚಕನನ್ನು ಬೆಂಗಳೂರು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಗ್ರಹಾರ ದಾಸರಹಳ್ಳಿ ನಿವಾಸಿ ರಮೇಶ್ ಶಾಸ್ತ್ರಿ (45) ಬಂಧಿತ ಅರ್ಚಕ, ಈತನಿಂದ 44 ಗ್ರಾಂ ಚಿನ್ನದ ನೆಕ್ಲೆಸ್ ವಶಕ್ಕೆ ಪಡೆಯಲಾಗಿದೆ. ಅಶೋಕ್ ಚಂದರಗಿ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಪೊಲೀಸರು ಮಾಹಿತಿ ನೀಡಿದರು.
ಅಶೋಕ್ ಚಂದರಗಿ ಎಂಬವರು ಕಳೆದ ತಿಂಗಳು ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ಜತೆಗೆ ಸತ್ಯನಾರಾಯಣ ಪೂಜೆಗೆ ಸಿದ್ಧತೆ ನಡೆಸಿದ್ದರು. ಅದಕ್ಕೆ ಅಗ್ರಹಾರ ದಾಸರಹಳ್ಳಿ ಯಲ್ಲಿ ದೇವಸ್ಥಾನವೊಂದರಲ್ಲಿ ಅರ್ಚಕನಾಗಿರುವ ರಮೇಶ್ ಶಾಸ್ತ್ರಿಗೆ ಪೂಜೆ ಮಾಡಿಕೊಡಲು ಹೇಳಿದ್ದರು. ಅದರಂತೆ ಮನೆಗೆ ಬಂದ ರಮೇಶ್ ಶಾಸ್ತ್ರಿ, ಬಂದು ಅಶೋಕ್ ಅವರ ಮನೆಯಲ್ಲೇ ಉಳಿದುಕೊಂಡು ಎರಡು ಪೂಜೆ ಮಾಡಿಕೊಟ್ಟಿದ್ದ. ಪೂಜೆ ಮಾಡುವಾಗ ಮನೆ ಸದಸ್ಯರ ಗಮನ ಬೇರೆಡೆ ಸೆಳೆದು ದೇವರ ಮೇಲಿದ್ದ ನಕ್ಲೆಸ್ ಕಳವು ಮಾಡಿದ್ದ. ಎರಡು ದಿನದ ಬಳಿಕ ಮನೆಯ ಮಹಿಳೆ, ದೇವರ ಪೋಟೋ ತೆಗೆಯುವಾಗ ಚಿನ್ನದ ನೆಕ್ಲೆಸ್ ನಾಪತ್ತೆಯಾಗಿರುವುದನ್ನು ಕಂಡು ಗಾಬರಿ ಗೊಂಡಿದ್ದರು. ಕೂಡಲೇ ಈ ಬಗ್ಗೆ ಅರ್ಚಕ ರಮೇಶ್ ಶಾಸ್ತ್ರಿಗೆ ಕರೆ ಮಾಡಿ ಕೇಳಿದಾಗ ತನಗೆ ಗೊತ್ತಿಲ್ಲ, ಆಗ ದೂರುದಾರ ಅಶೋಕ್, ಒಂದು ವೇಳೆ ತೆಗೆದುಕೊಂಡಿದ್ದರೆ ವಾಪಸ್ ಕೊಟ್ಟು ಬಿಡಿ, ಪೊಲೀಸ್ ಠಾಣೆಗೆ ದೂರು ನೀಡುವುದಿಲ್ಲ ಎಂದಿದ್ದಾರೆ. ಆದರೂ ರಮೇಶ್ ತನಗೆ ಗೊತ್ತಿಲ್ಲ ಎಂದು ಹೇಳಿದ್ದ. ಹೀಗಾಗಿ ಅಶೋಕ್ ಚಂದರಗಿ, ಅನುಮಾನಗೊಂಡ ರಮೇಶ್ ಶಾಸ್ತ್ರಿ ವಿರುದ್ಧ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ನಂತರ ತನಿಖೆ ವೇಳೆ ಆರೋಪಿ ಫೈನಾನ್ ವೊಂದರಲ್ಲಿ 2.5 ಲಕ್ಷ ರು.ಗೆ ನಕ್ಲೆಸ್ ಅನ್ನು ಅಡಮಾನ ಇಟ್ಟಿರುವುದು ಗೊತ್ತಾಗಿತ್ತು. ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.