ಧಾರ್ಮಿಕ

ನವರಾತ್ರಿಯಲ್ಲಿ ಪೂಜಿಸಲ್ಪಡುವ ನವ ದುರ್ಗೆಯರು

Views: 140

ಕನ್ನಡ ಕರಾವಳಿ ಸುದ್ದಿ: ಭಾರತದ ಉದ್ದಗಲಕ್ಕೂ ಆಚರಿಸುವ ಹಬ್ಬಗಳ ಪೈಕಿ ನವರಾತ್ರಿ ಪ್ರಮುಖವಾದುದು. ಆಚರಣೆಗಳು ಬೇರೆ ಬೇರೆ ರೀತಿ ಇದ್ದರೂ ಆರಾಧನೆ ಮಾತ್ರ ಆದಿಶಕ್ತಿಯ ಅವತಾರಗಳಾದ ನವದುರ್ಗೆಯರದ್ದೇ. ದುರ್ಗಾ ದೇವಿಯ ಒಂಬತ್ತು ಬೇರೆ ಬೇರೆ ರೂಪಗಳಿಗೆ ಶರತ್‌ಕಾಲದ ನವರಾತ್ರಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ.

ದಸರೆಯ ಸಂಭ್ರಮಾಚರಣೆ ನಡೆಯುವ ಒಂಬತ್ತು ದೈವಿಕ ರಾತ್ರಿಗಳಲ್ಲಿ ದೇವಿಯು ಆಳವಾದ ವಿಶ್ರಾಂತಿ ಮತ್ತು ನವಸೊಬಗನ್ನು ಪಡೆಯುತ್ತಾಳೆ. ಇದರ ದ್ಯೋತಕವಾಗಿ, ದೇವಿಯು ಪ್ರತಿದಿನವೂ ಒಂದೊಂದು ರೂಪ ಮತ್ತು ವರ್ಣವೈವಿಧ್ಯದಲ್ಲಿ ಕಂಗೊಳಿಸುತ್ತಾಳೆ. 

1. ಶೈಲಪುತ್ರಿ: ಇದು ದುರ್ಗಾದೇವಿಯ ಮೊದಲ ಅಭಿವ್ಯಕ್ತಿಯಾಗಿದ್ದು, ನವರಾತ್ರಿಯ ಮೊದಲ ದಿನದಂದು ಈ ಸ್ವರೂಪವನ್ನು ಪೂಜಿಸಲಾಗುತ್ತದೆ. ಪರ್ವತಪುತ್ರಿಯಾದ ಕಾರಣದಿಂದಲೇ ‘ಶೈಲಪುತ್ರಿ’ ಎಂದು ಕರೆಸಿಕೊಳ್ಳುವ ಈಕೆ, ಶಕ್ತಿ ಮತ್ತು ಧೈರ್ಯದ ಪ್ರತೀಕಳಾಗಿದ್ದಾಳೆ. ಆನಂದ ಮತ್ತು ಶಕ್ತಿಯನ್ನು ಪ್ರತಿನಿಧಿಸುವ ಹಳದಿ ಬಣ್ಣದಲ್ಲಿ ಇವಳು ಕಂಗೊಳಿಸುತ್ತಾಳೆ.

2. ಬ್ರಹ್ಮಚಾರಿಣಿ: ನವರಾತ್ರಿಯ ಎರಡನೇ ದಿನವು ಈ ದೇವಿಗೆ ಅರ್ಪಿತವಾಗಿದೆ. ಶಾಂತಿ ಮತ್ತು ಸಮೃದ್ಧಿಯನ್ನು ಬಿಂಬಿಸುವ ಹಸಿರು ಬಣ್ಣದಲ್ಲಿ ಕಂಗೊಳಿಸುವ ಈ ದೇವಿ, ತಪಸ್ಸು, ಧೈರ್ಯ ಮತ್ತು ಸಹನೆಯ ಸಂಕೇತವಾಗಿದ್ದಾಳೆ.

3. ಚಂದ್ರಘಂಟಾ: ನವರಾತ್ರಿಯ ಮೂರನೇ ದಿನವು ಈ ದೇವಿಯ ದಿನವಾಗಿದೆ. ಹಣೆಯ ಮೇಲೆ ಅರ್ಧಚಂದ್ರನನ್ನು ಹೊಂದಿರುವ ಉಗ್ರ ದೇವತೆಯಾಗಿರುವುದರಿಂದ ಈ ದೇವಿಗೆ ಚಂದ್ರಘಂಟಾ ಎಂದೇ ಕರೆಯಲಾಗುತ್ತದೆ. ಧೈರ್ಯ ಮತ್ತು ಸಮತೋಲನವನ್ನು ಸಂಕೇತಿಸುವ ಬೂದು ಬಣ್ಣದಲ್ಲಿ ಕಂಗೊಳಿಸುವ ಈ ದೇವಿಯು ದುಷ್ಟರ ಸಂಹಾರಕಿಯಾಗಿದ್ದಾಳೆ.

4. ಕೂಷ್ಮಾಂಡ: ನವರಾತ್ರಿಯ ನಾಲ್ಕನೇ ದಿನ ಕಂಗೊಳಿಸುವ ಈ ದೇವಿಯು ಉರಿಯುತ್ತಿರುವ ಸೂರ್ಯನೊಳಗೆ ವಾಸಿಸುವ ಶಕ್ತಿದೇವತೆಯಾಗಿದ್ದಾಳೆ. ಸೃಷ್ಟಿಯ ಮೂಲವೂ, ಶಕ್ತಿ ಮತ್ತು ಚೈತನ್ಯದ ಸ್ವರೂಪಳೂ ಆಗಿರುವ ಈಕೆ, ಸೃಜನಶಕ್ತಿ ಮತ್ತು ಉತ್ಸಾಹವನ್ನು ಪ್ರತಿನಿಧಿಸುವ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸುತ್ತಾಳೆ.

5. ಸ್ಕಂದಮಾತಾ: ಪುಟ್ಟ ಕಾರ್ತಿಕೇಯನನ್ನು (ಸ್ಕಂದ) ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ಈಕೆಯನ್ನು ಸ್ಕಂದಮಾತಾ ಎಂದೇ ಕರೆಯಲಾಗುತ್ತದೆ. ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಈಕೆ ಕರುಣೆಯ ಪ್ರತೀಕಳಾಗಿದ್ದು, ಶುದ್ಧತೆ ಮತ್ತು ತಾಯ್ತನದ ಸಂಕೇತವಾಗಿರುವ ಬಿಳಿಯ ಬಣ್ಣದಿಂದ ಕಂಗೊಳಿಸುತ್ತಾಳೆ.

6. ಕಾತ್ಯಾಯಿನಿ: ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಈಕೆಗೆ ಅಷ್ಟಭುಜಗಳಿರುತ್ತವೆ.ಸಿಂಹವಾಹನೆಯಾಗಿರುವ ಈಕೆ ತನ್ನ ಕರಗಳಲ್ಲಿ ಖಡ್ಗ, ತ್ರಿಶೂಲ, ಕಮಲ ಪುಷ್ಪಗಳನ್ನು ಧರಿಸಿರುತ್ತಾಳೆ. ಅಸುರ ಸಂಹಾರಿಣಿಯೂ ಧರ್ಮರಕ್ಷಕಿಯೂ ಆಗಿರುವ ಈಕೆ ಯುವತಿಯರ ಆರಾಧ್ಯದೇವಿಯೆಂದು ಪ್ರಸಿದ್ದಳು. ಪ್ರೇಮ ಮತ್ತು ಶಕ್ತಿಯನ್ನು ಬಿಂಬಿಸುವ ಕೆಂಪು ಬಣ್ಣದಿಂದ ಇವಳು ಕಂಗೊಳಿಸುತ್ತಾಳೆ.

7. ಕಾಳರಾತ್ರಿ: ದಂತಕಥೆಗಳ ಪ್ರಕಾರ, ರಾಕ್ಷಸರನ್ನು ಕೊಲ್ಲಲು ತನ್ನ ಚರ್ಮದ ಬಣ್ಣವನ್ನು ತ್ಯಾಗಮಾಡಿ ಕಪ್ಪು ಬಣ್ಣವನ್ನು ಧರಿಸಿದಾಕೆ ಈ ಕಾಳರಾತ್ರಿ. ನವರಾತ್ರಿಯ ಏಳನೇ ದಿನ ಪೂಜಿಸಲ್ಪಡುವ ಈ ದೇವಿಯು ದುಷ್ಟ ಸಂಹಾರಕಿಯಾಗಿರುವುದರ ಜತೆಗೆ, ಭಯವನ್ನು ಹೋಗಲಾಡಿಸುವ ಶಕ್ತಿಯಾಗಿದ್ದಾಳೆ. ಭಯನಾಶವನ್ನೂ ರಹಸ್ಯವನ್ನೂ ಪ್ರತಿನಿಧಿಸುವ ನೀಲಿ ಬಣ್ಣದಿಂದ ಇವಳು ಕಂಗೊಳಿಸುತ್ತಾಳೆ.

8. ಮಹಾಗೌರಿ: ನವರಾತ್ರಿಯ ಎಂಟನೇ ದಿನವು ದುರ್ಗಾಷ್ಟಮಿ ಎಂದು ಕರೆಯಲ್ಪಡುತ್ತದೆ ಮತ್ತು ಇದು ಮಹಾಗೌರಿಗೆ ಸಮರ್ಪಿತವಾಗಿದೆ. ದೇವಿಯ ನವರೂಪಗಳಲ್ಲಿ ಇವಳದ್ದು ಅತ್ಯಂತ ಆಕರ್ಷಕವೆಂದು ಪರಿಗಣಿಸಲ್ಪಟ್ಟಿದೆ. ಶಾಂತಿ, ಶುದ್ಧತೆ ಮತ್ತು ಭಕ್ತಿಯ ಸಂಕೇತವಾಗಿರುವ ಈಕೆಯು ಸೌಂದರ್ಯ ಮತ್ತು ಭಕ್ತಿಯನ್ನು ಬಿಂಬಿಸುವ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಾಳೆ.

9. ಸಿದ್ದಿದಾತ್ರಿ: ನವರಾತ್ರಿಯ ಒಂಬತ್ತನೇ ದಿನದಂದು ಪೂಜಿಸಲ್ಪಡುವ ಈ ದೇವಿಯು ನೈಸರ್ಗಿಕವಾಗಿ ಗುಣಪಡಿಸುವ ಶಕ್ತಿಯನ್ನು ಹೊಂದಿದ್ದಾಳೆ. ಆನಂದದಾಯಕಳಾದ ಇವಳು ಜ್ಞಾನ ಮತ್ತು ಶಕ್ತಿಯನ್ನೂ ಎಲ್ಲಾ ಸಿದ್ದಿಗಳನ್ನೂ ಅನುಗ್ರಹಿಸುತ್ತಾಳೆ. ಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಸಂಕೇತಿಸುವ ನೇರಳೆ ಬಣ್ಣದಲ್ಲಿ ಇವಳು ಕಂಗೊಳಿಸುತ್ತಾಳೆ.

ಮೇಲೆ ವಿವರಿಸಲಾಗಿರುವಂತೆ, ದೇವಿಯು ಕಂಗೊಳಿಸುವ ಬಣ್ಣಗಳಿಗೆ ಅನುಗುಣವಾಗಿರುವ ವಸ್ತ್ರಗಳನ್ನೇ ಭಕ್ತರೂ ಧರಿಸಿ ದೇವಿಯ ಆರಾಧನೆ ಮಾಡುವ ಪದ್ಧತಿ ಪ್ರಚಲಿತವಾಗಿದೆ.

Related Articles

Back to top button