ಸಾಮಾಜಿಕ

15 ವರ್ಷದ ಬಾಲಕಿ ಜೊತೆ ಗ್ರಾಮ ಪಂಚಾಯತ್ ಅಧ್ಯಕ್ಷನ ಮದುವೆ: ಪೋಕ್ಸೋ ಕೇಸ್ ದಾಖಲು 

Views: 155

ಕನ್ನಡ ಕರಾವಳಿ ಸುದ್ದಿ:ಎರಡು ವರ್ಷದ ಹಿಂದೆ 15 ವರ್ಷದ ಬಾಲಕಿಯನ್ನು ಗ್ರಾಮ ‌ಪಂಚಾಯಿತಿ ಅಧ್ಯಕ್ಷರೊಬ್ಬರು ವಿವಾಹವಾಗಿದ್ದಾರೆ ಎಂಬ ಆರೋಪ ತಡವಾಗಿ ಕೇಳಿಬಂದಿದೆ. ಈ ಸಂಬಂಧ ಗ್ರಾಮ ‌ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದ ಪಂಚಾಯಿತಿ ಅಧ್ಯಕ್ಷ ‌ಭೀಮಶಿ ಕಳ್ಳಿಮನಿ ಬಾಲ್ಯ ವಿವಾಹ ಮಾಡಿಕೊಂಡ ಆರೋಪಿಯಾಗಿದ್ದಾರೆ.

2023 ನವೆಂಬರ್ 5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ವಿವಾಹವಾಗಿದ್ದರು. ಮದುವೆ ವೇಳೆ ಆ ಬಾಲಕಿಗೆ ಕೇವಲ 15 ವರ್ಷ ವಯಸ್ಸು. ಬಾಲ್ಯ ವಿವಾಹ ವಿಚಾರ ತಡವಾಗಿ ಗೊತ್ತಾಗಿದ್ದು, ಈ ಸಂಬಂಧ ಆರೋಪಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಳ್ಳಿಮನಿ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 30ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಬಾಲ್ಯ ವಿವಾಹ ಕುರಿತು ದೂರು ಬಂದ ತಕ್ಷಣವೇ ಬಸ್ಸಾಪುರಕ್ಕೆ ಮಕ್ಕಳ ರಕ್ಷಣಾ ತಂಡವು ನಾಲ್ಕು ಬಾರಿ ಭೇಟಿ ನೀಡಿತ್ತು. ಜಿಲ್ಲಾ ‌ಮಕ್ಕಳ ರಕ್ಷಣಾಧಿಕಾರಿ ಡಾ. ಪರ್ವಿನ್ ನೇತೃತ್ವದ ತಂಡ ನಾಲ್ಕು ಸಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಆದರೆ, ಬಾಲಕಿ ಪತ್ತೆ ಹಚ್ಚಲು ರಕ್ಷಣಾ ತಂಡ ವಿಫಲವಾಗಿತ್ತು. ಈ ನಡುವೆ ತನ್ನ ಪತ್ನಿ ಪ್ರಾಪ್ತ ವಯಸ್ಸಿನವಳು ಎಂಬ ದಾಖಲೆಯನ್ನು ಆರೋಪಿ ಭೀಮಶಿ ಬಿಡುಗಡೆ ‌ಮಾಡಿದ್ದರು. ಬಂಧನದ ಭೀತಿಯಿಂದ ‌ಪತ್ನಿಯ ನಕಲಿ ಜನನ ಪ್ರಮಾಣ ಪತ್ರವನ್ನು ವೈರಲ್ ಮಾಡಿದ್ದ‌ರು ಎಂದು ತಿಳಿದುಬಂದಿದೆ

ಬಾಲಕಿಯ ಶಾಲಾ‌ ಟ್ರಾನ್ಸಫರ್‌ ಸರ್ಟಿಫಿಕೇಟ್ ಜೊತೆಗೆ ಹೊಸ ಜನನ ಪ್ರಮಾಣದ ‌ದಾಖಲೆ‌ ಹೋಲಿಕೆ ಮಾಡಿದಾಗ ಭೀಮಶಿ ನಕಲಿ ದಾಖಲೆ ಸೃಷ್ಟಿಸಿರುವುದು ದೃಢವಾದ ಹಿನ್ನೆಲೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಆರೋಪಿ ಸದ್ಯ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

 

Related Articles

Back to top button