ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಆನ್‌ಲೈನ್ ವಂಚನೆ ಪ್ರಕರಣಗಳು: ವೈದ್ಯರು, ಎಂಜಿನಿಯರ್, ಪ್ರಾಧ್ಯಾಪಕರು ಸೇರಿದಂತೆ ಸುಶಿಕ್ಷಿತರೆ ಟಾರ್ಗೆಟ್.. !

Views: 97
ಉಡುಪಿ: ನಿಮಗೆ ಕೊರಿಯರ್ ಬಂದಿದೆ ಅದರಲ್ಲಿ ಇರಾನ್ ದೇಶದ ಪಾಸ್ ಪೋರ್ಟ್‌ಗಳಿವೆ, ಜೊತೆಗೆ ಮಾದಕ ವಸ್ತು ಕೂಡ ಇದೆ. ಮುಂಬೈ ಪೊಲೀಸರ ತನಿಖೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ… ಇಷ್ಟು ಹಣ ನೀಡಿದರೆ ಪ್ರಕರಣದಿಂದ ನಿಮ್ಮನ್ನು ರಕ್ಷಿಸುತ್ತೇವೆ…
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮಗೆ ಅತೀ ಹೆಚ್ಚಿನ ಲಾಭ ತಂದು ಕೊಡುತ್ತೇವೆ. ನಮ್ಮ ಖಾತೆಗೆ ಹಣ ವರ್ಗಾಯಿಸಿ…
ಇದು ಈಚೆಗೆ ನಗರದ ಕೆಲವರಿಂದ ಹಣ ದೋಚಿರುವ ಆನ್‌ಲೈನ್ ವಂಚಕರ ಆಮಿಷದ ನುಡಿಗಳು. ಇವರ ಮಾತು ಕೇಳಿದ ಹಲವರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.
ಉಡುಪಿಯ ಹೊಟೇಲ್‌ವೊಂದರ ಮಾಲಕರಿಗೆ ಇಂತಿಷ್ಟು ಪ್ಲೇಟ್ ತಿಂಡಿ ಬೇಕು’ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬರು ದರ ವಿಚಾರಿಸಿದ್ದಾರೆ. ಬಳಿಕ ಮುಂಗಡ ಹಣ ಎಷ್ಟು ಪಾವತಿಸಬೇಕು ಎಂದು ಸೂಚಿಸಿದ ಮೇರೆಗೆ ಹೊಟೇಲ್ ಮಾಲಕರು 1 ಸಾವಿರ ರೂ. ಹಾಕುವಂತೆ ತಿಳಿಸಿದ್ದರು. ಆದರೆ ಆ ವ್ಯಕ್ತಿ 10 ಸಾವಿರ ರೂ.ಗಳನ್ನು ಹಾಕಿದ್ದ. ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿ ಕರೆ ಮಾಡಿ ಪ್ರಮಾದವಶತ್ 10 ಸಾವಿರ ರೂ.ಗಳನ್ನು ಹಾಕಿದ್ದೇನೆ. 9 ಸಾವಿರ ರೂ. ವಾಪಸ್ ಹಾಕುವಂತೆ ತಿಳಿಸಿದ್ದಾನೆ. ಆದರೆ ಇದಕ್ಕೆ ಹೊಟೇಲ್ ಮಾಲಕರು ಒಪ್ಪಲಿಲ್ಲ. ನಾಳೆ ಬಂದು ಪಡೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಇದರಿಂದ ಕೆರಳಿದ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅನುಮಾನಗೊಂಡ ಹೊಟೇಲ್ ಮಾಲಕರು ಆ ಸಂದೇಶವನ್ನು ಮತ್ತೊಂದು ಬಾರಿ ಪರಿಶೀಲಿಸಿದಾಗ ಅದು ಕೇವಲ ಸಂದೇಶವಾಗಿತ್ತೆ ವಿವಾ ಇವರ ಖಾತೆಗೆ ಹಣ ಸಂದಾಯವಾಗಿರಲಿಲ್ಲ.
ಕರೆ ಮಾಡಿದಾತ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ. ಮೊದಲಿಗೆ ಯಾರೋ ಸ್ಥಳೀಯ ಕಾರ್ಮಿಕರು ಅಂದುಕೊಂಡಿದ್ದ ಮಾಲಕರಿಗೆ ಅನಂತರ ಆತನ ಮಾತಿನಿಂದ ಇದು ವಂಚಕರ ಕೃತ್ಯ ಎಂಬುವುದು ತಿಳಿಯಿತು.
ಜಿಲ್ಲೆಯಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ನಗರದ ಸೆನ್ (ಸೈಬರ್, ಎಕನಾಮಿಕ್, ನಾರ್ಕೋಟಿಕ್ಸ್) ಅಪರಾಧ ಠಾಣೆಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ತಿಳಿಯುತ್ತದೆ.
ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಉಡುಪಿಯ ಸೆನ್ ಠಾಣೆಯಲ್ಲಿ 39 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಜಿಲ್ಲೆಯಲ್ಲಿ 940 ಪ್ರಕರಣಗಳು ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಮೂಲಕ ದಾಖಲಾಗಿವೆ.
ನಕಲಿ ಗುರುತಿನ ಚೀಟಿ, ನಕಲಿ ವಿಳಾಸ ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿರುವ ವಂಚಕರನ್ನು ಸೆರೆಹಿಡಿಯಲು ಪೊಲೀಸರಿಗೂ ಸಾಧ್ಯವಾಗುತ್ತಿಲ್ಲ. ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಗುಜರಾತ್ ಮೊದಲಾದ ರಾಜ್ಯಗಳಲ್ಲಿದ್ದಕೊಂಡೇ ವಂಚಕರು ಬಲೆ ಬೀಸುತ್ತಾರೆ.
ವೈದ್ಯರು, ಎಂಜಿನಿಯರ್, ಪ್ರಾಧ್ಯಾಪಕರು ಸೇರಿದಂತೆ ಸುಶಿಕ್ಷಿತರು ಕೂಡ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಸೆನ್ ಪೊಲೀಸ್ ಠಾಣೆಯ ಪೊಲೀಸರು ಆನ್‌ಲೈನ್ ವಂಚನೆ ಕುರಿತು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದರೂ ವಂಚನೆಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.
ಹಲವು ವಿಧ: ಆನ್‌ಲೈನ್ ಮೂಲಕ ನಡೆಯುವ ವಂಚನೆಗಳಲ್ಲಿ ಹಲವು ವಿಧಗಳಿವೆ. ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಮ್ ಆ್ಯಪ್‌ನಲ್ಲಿ ಗ್ರೂಪ್‌ಗಳನ್ನು ರಚಿಸಿ, ಅದಕ್ಕೆ ಜನರನ್ನು ಸೇರಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಾರೆ. ಬಳಿಕ ಹಣವನ್ನು ಮರಳಿಸದೆ ವಂಚಿಸುತ್ತಿದ್ದಾರೆ.
ಉದ್ಯೋಗಾರ್ಥಿಗಳಿಗೂ ಪಾರ್ಟ್ ಟೈಂ ಕೆಲಸದ ಆಮಿಷವೊಡ್ಡಿ ವಂಚನೆ ಮಾಡಲಾಗುತ್ತಿದೆ. ಆನ್‌ಲೈನ್ ಲೋನ್ ಆ್ಯಪ್ ಬಳಸುವವರೂ ಇಂತಹ ವಂಚನೆಗೆ ಒಳಗಾಗುತ್ತಿದ್ದಾರೆ. ವಿದ್ಯುತ್ ಬಿಲ್ ಪಾವತಿಸಲು ಬಾಕಿ ಇದೆ ಎಂದು ಕ್ಯು ಆರ್ ಕೋಡ್‌ಗಳನ್ನು ಕಳುಹಿಸಿಯೂ ಹಣ ಲಪಟಾಯಿಸಿರುವ ಪ್ರಕರಣಗಳು ನಡೆದಿವೆ. ಮೀಶೊ ಮೊದಲಾದ ಆನ್‌ಲೈನ್ ಶಾಂಪಿಂಗ್ ವೇದಿಕೆಗಳ ಗಿಫ್ಟ್ ಕಾರ್ಡ್‌ಗಳ ಹೆಸರಿನಲ್ಲೂ ವಂಚನೆ ನಡೆಯುತ್ತಿದೆ ಎನ್ನುತ್ತಾರೆ ಪೊಲೀಸರು.
ಸೆನ್ ಪೋಲಿಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರು ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ನೋಡಲ್ ಅಧಿಕಾರಿಯೂ ಹೌದು. ಸೈಬರ್ ಅಪರಾಧಕ್ಕೆ ಒಳಗಾದಲ್ಲಿ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. www.cybercrime.gov.in ಆನ್‌ಲೈನ್ ಪೋರ್ಟಲ್‌ನಲ್ಲೂ ದೂರು ದಾಖಲಿಸಬಹುದು.