ಇತರೆ

ಅಳಿಯನ ಮನೆಯೊಳಗೆ ಗುಂಡಿ ತೆಗೆದು ಮಗಳ ಶವ ಸಂಸ್ಕಾರ ಮಾಡಿದ ಅಪ್ಪ!

Views: 106

ಕನ್ನಡ ಕರಾವಳಿ ಸುದ್ದಿ: ಮಗಳ ಆತ್ಮಹತ್ಯೆ ನಂತರ  ಕಂಗಾಲಾದ ತಂದೆ, ಅಳಿಯನ ಮನೆಯ ನಡುಮನೆಯಲ್ಲೇ ಮಗಳ ಶವವನ್ನು ಹೂತಿರುವ ಆಘಾತಕಾರಿ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ಪಾವಗಡ ಮೂಲದ ಶೃತಿ ಎಂಬ ಗೃಹಿಣಿ ಬೆಂಗಳೂರಿನ ಯಲಹಂಕದಲ್ಲಿ ಆತ್ಮತ್ಯೆ ಮಾಡಿಕೊಂಡಿದ್ದರು. ಮಗಳ ಸಾವಿನಿಂದ ತೀವ್ರವಾಗಿ ನೊಂದ ತಂದೆ ರಾಜುನಾಯ್ಕ, ಮಗಳ ಅಂತ್ಯಸಂಸ್ಕಾರವನ್ನು ವಿಭಿನ್ನವಾಗಿ ಮಾಡಲು ನಿರ್ಧರಿಸಿದ್ದರು. ಪಾವಗಡ ತಾಲೂಕಿನ ಭೂಪೂರು ತಾಂಡಾದಲ್ಲಿರುವ ಅಳಿಯ ಪವನ್ ಕಲ್ಯಾಣ್ ಅವರ ನಿರ್ಮಾಣ ಹಂತದ ಮನೆಗೆ ಶೃತಿಯ ಮೃತದೇಹವನ್ನು ತರಲಾಗಿತ್ತು.

ಅಳಿಯ ಮನೆ ಕಟ್ಟಲು ನಾನೇ ಹಣ ಕೊಟ್ಟಿದ್ದೆ. ನನ್ನ ಮಗಳ ನೆನಪಿಗಾಗಿ ಇಲ್ಲೇ ಅವಳ ಸಮಾಧಿ ಮಾಡಿ ಸ್ಮಾರಕ ಮಾಡುತ್ತೇನೆ ಎಂದು ಪಟ್ಟು ಹಿಡಿದ ರಾಜುನಾಯ್ಕ, ಮನೆಯ ನಡುಮನೆಯಲ್ಲಿ ಹೊಸದಾಗಿ ಹಾಕಿದ್ದ ಟೈಲ್ಸ್ ಕಲ್ಲುಗಳನ್ನು ಕತ್ತರಿಸಿ ಗುಂಡಿ ತೋಡಿದ್ದರು. ಅಳಿಯನ ಮನೆಯ ಒಳಗೇ ಮಗಳ ಶವವನ್ನು ಹೂತಿಟ್ಟು ಅಂತ್ಯಸಂಸ್ಕಾರ ಮಗಳ ಮೇಲಿನ ಅತಿಯಾದ ಪ್ರೀತಿ ಮತ್ತು ಅಳಿಯನ ಮೇಲಿನ ಆಕ್ರೋಶದ ಹಿನ್ನೆಲೆಯಲ್ಲಿ ನೆರವೇರಿಸಿದ್ದರು.

ಮನೆಯೊಳಗೆ ಶವ ಹೂತಿರುವ ವಿಷಯ ತಿಳಿಯುತ್ತಿದ್ದಂತೆ ತಿರುಮಣಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮನೆಯೊಳಗೆ ಶವ ಸಂಸ್ಕಾರ ಮಾಡುವುದು ಕಾನೂನುಬಾಹಿರ ಮತ್ತು ಅಸಮರ್ಪಕ ಎಂದು ತಂದೆ ರಾಜುನಾಯ್ಕನ ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು. ಸುದೀರ್ಘ ಚರ್ಚೆಯ ನಂತರ ಪೊಲೀಸರ ಮಾತಿಗೆ ಒಪ್ಪಿದ ರಾಜುನಾಯ್ಕ, ಮನೆಯೊಳಗೆ ಹೂತಿದ್ದ ಮಗಳ ಮೃತದೇಹವನ್ನು ಹೊರತೆಗೆಯಲು ಸಮ್ಮತಿಸಿದರು.

ಈ ವಿಲಕ್ಷಣ ಘಟನೆಯಿಂದಾಗಿ ಭೂಪೂರು ತಾಂಡಾದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Related Articles

Back to top button
error: Content is protected !!