ಸಚಿವ ಸಂಪುಟದಲ್ಲಿ ಮೇಜರ್ ಬದಲಾವಣೆಗಾಗಿ ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಆಯ್ದ ಸಚಿವರಿಗೆ ಹೈಕಮಾಂಡ್ ಬುಲಾವ್ .!

Views: 86
ಹೊಸದಿಲ್ಲಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದ್ದು, ನಾಳೆ ಅವರು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಒಂದೆಡೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ- ಜೆಡಿಎಸ್ (BJP- JDS) ಮೈತ್ರಿ ಪಕ್ಷಗಳು ರಣಕಹಳೆ ಮೊಳಗಿಸಿವೆ. ಸರ್ಕಾರದ ವಿರುದ್ಧ ವಿಧಾನಮಂಡಲ ಅಧಿವೇಶನದ ಒಳಗೆ ಮುಗಿಬಿದ್ದಿದ್ದ ವಿಪಕ್ಷಗಳು ಅಧಿವೇಶನದ ಹೊರಗೂ ಇದರ ಲಾಭ ಪಡೆಯಲು ಪ್ಲಾನ್ ಮಾಡಿವೆ. ಹೀಗಾಗಿ ಪಾದಯಾತ್ರೆ ಪಾಲಿಟಿಕ್ಸ್ ಮಾಡಲು ಮುಂದಾಗಿವೆ. ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ ಹಾಗೂ ಸಿಎಂ ವಿರುದ್ಧ ಕೇಳಿ ಬಂದಿರುವ ಮುಡಾ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ ಮೈತ್ರಿ ಪಕ್ಷಗಳು ಇತ್ತ ರಾಜ್ಯದಲ್ಲೂ ಅತ್ತ ದೆಹಲಿಯಲ್ಲೂ ಸರ್ಕಾರದ ವಿರುದ್ಧ ಹೋರಾಟ ಜೋರು ಮಾಡಿವೆ. ಮೈತ್ರಿ ಪಕ್ಷಗಳ ನಡೆಯಿಂದ ಹೈಕಮಾಂಡ್ ವಿಚಲಿತಗೊಂಡಿದೆ.
ಹೀಗಾಗಿ ಸಿಎಂ, ಡಿಸಿಎಂ ಸೇರಿದಂತೆ ಆಯ್ದ ಸಚಿವರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಇಬ್ಬರೂ ಮಂಗಳವಾರ ದಿಲ್ಲಿಗೆ ತೆರಳಿ ಬುಧವಾರ ಸಂಜೆ ವಾಪಸು ಆಗಲಿದ್ದಾರೆ. ಕೆಲ ಸಚಿವರು ಇಂದೇ ದೆಹಲಿಗೆ ದೌಡಾಯಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದ್ದು, ಮೈತ್ರಿ ಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ಚರ್ಚೆ ನಡೆಸಿ ಮೈತ್ರಿ ಪಕ್ಷಗಳ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಚುರುಕುಗೊಳಿಸುವುದು, ಮುಂದೆ ಬರುತ್ತಿರುವ ಚುನಾವಣೆಗಳಿಗೆ ಸಿದ್ಧತೆ, ಉಪಚುನಾವಣೆ ಸೇರಿದಂತೆ ಇತರೆ ಚುನಾವಣೆಗಳ ಬಗ್ಗೆ ಚರ್ಚೆ, ಸರ್ಕಾರದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸುವುದು, ಬಣ ಬಡಿದಾಟಕ್ಕೆ ಬ್ರೇಕ್ ಹಾಕುವ ಬಗ್ಗೆ ಚರ್ಚೆ ಮಾಡುವುದು, ಮಹಿಳಾ ಘಟಕದ ಅಧ್ಯಕ್ಷೆ ನೇಮಕದ ಬಗ್ಗೆ ಒಪಿನಿಯನ್ ಕಲೆಕ್ಟ್ ಮಾಡುವುದು ಹೈಕಮಾಂಡ್ ಉದ್ದೇಶವಾಗಿದೆ.
ರಾಜ್ಯ ಸಚಿವ ಸಂಪುಟ, ಕೆಪಿಸಿಸಿ ಪುನಾರಚನೆ ಕುರಿತು ಪ್ರಾಥಮಿಕ ಹಂತದ ಮಾತುಕತೆಯ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಗುಸುಗುಸು ಟಾಕ್ ಶುರುವಾಗಿದೆ. ಸಚಿವ ಸಂಪುಟದಲ್ಲಿ ಒಂದಷ್ಟು ಬದಲಾವಣೆಗೆ, ಸಚಿವರ ಖಾತೆ ಅದಲು ಬದಲು ಮಾಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದ್ದು, ಕೆಲವು ಹಿರಿಯ ಸಚಿವರಿಂದಲೂ ಖಾತೆ ಬದಲಾವಣೆಗೆ ಸಲಹೆ ಬಂದಿದೆ.
ಲೋಕಸಭೆ ಫಲಿತಾಂಶ ಗಮನದಲ್ಲಿರಿಸಿಕೊಂಡು ಬದಲಾವಣೆ ಮಾಡುವ ಬಗ್ಗೆ ಅಭಿಪ್ರಾಯ ಪಡೆಯಲಾಗಿದೆ. 6-7 ಸಚಿವರ ಖಾತೆಗಳ ಅದಲು ಬದಲು ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ಬಗ್ಗೆ ಸಿಎಂ, ಡಿಸಿಎಂ ದೆಹಲಿ ಭೇಟಿ ಬಳಿಕವೇ ಸ್ಪಷ್ಟನೆ ಸಿಗಲಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗೂ ಕೆಲವರಿಂದ ಕೇಳಿ ಬಂದಿದೆ. ಕೆಪಿಸಿಸಿ ನೂತನ ಅಧ್ಯಕ್ಷರಾಗಬೇಕು ಎಂದು ಹಲವು ಮುಖಂಡರು ಈಗಾಗಲೇ ಪ್ರಭಾವ ಬಳಸುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕೆಲವು ಸಚಿವರ ಸ್ವಕ್ಷೇತ್ರಗಳಲ್ಲಿ ಲೀಡ್ ಕಡಿಮೆ ಆಗಿದೆ. ಲೀಡ್ ಕಡಿಮೆ ಕೊಟ್ಟ ಸಚಿವರ ತಲೆದಂಡಕ್ಕೆ ಸಚಿವ ಸ್ಥಾನ ಆಕಾಂಕ್ಷಿಗಳಿಂದ ಒತ್ತಡವಿದೆ. ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿಲ್ಲ ಎಂಬ ಅಭಿಪ್ರಾಯ ಮೂಡಿದ್ದು, ಅಂತಹ ಸಚಿವರಿಂದ ಸರ್ಕಾರದ ಇಮೇಜ್ ಹೆಚ್ಚಾಗಿಲ್ಲ. ಜೊತೆಗೆ ಪಕ್ಷಕ್ಕೂ ಯಾವುದೇ ಲಾಭವಿಲ್ಲ. ಹಾಗಾಗಿ ಕೆಲ ಸಚಿವರನ್ನು ಕೈ ಬಿಡಬೇಕು ಎಂದು ಶಾಸಕರು ಒತ್ತಾಯ ಮಾಡಿದ್ದರು.






