ಪೋಲಿಸ್ ವಾಹನದ ಮೇಲೆ ಬಾಂಬ್ ಎಸೆತ: ಆರೋಪಿ ಎನ್‌ಕೌಂಟರ್ ನಲ್ಲಿ ಹತ್ಯೆ!
Views: 67
ಕನ್ನಡ ಕರಾವಳಿ ಸುದ್ದಿ: ಪೊಲೀಸರು ಎನ್‌ಕೌಂಟರ್ ನಡೆಸಿ ಪೊಲೀಸ್ ವಾಹನದ ಮೇಲೆ ಕಂಟ್ರಿ ಬಾಂಬ್ ಎಸೆದಿದ್ದ ಆರೋಪಿಯನ್ನು ಹತ್ಯೆ ಮಾಡಿದ್ದಾರೆ.
ಎನ್ ಕೌಂಟರ್‌ನಲ್ಲಿ ಹತ್ಯೆಯಾದ ಆರೋಪಿಯನ್ನು ಅಲಗುರಾಜ (30) ಎಂದು ಗುರುತಿಸಲಾಗಿದೆ.
ಬಾಂಬ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಪೊಲೀಸರು ಬಂಧಿಸಿದ್ದರು. ಆತನ ಶಸ್ತ್ರಾಸ್ತ್ರಗಳನ್ನು ಮುಚ್ಚಿಟ್ಟಿದ್ದ ಸ್ಥಳಕ್ಕೆ ಪೊಲೀಸರು ಆತನನ್ನು ಕರೆದೊಯ್ದಿದ್ದರು. ಈ ವೇಳೆ ಆರೋಪಿ ಹರಿತವಾದ ಆಯುಧದಿಂದ ಇನ್ಸ್‌ಪೆಕ್ಟರ್ ಶಂಕರ್ ಮೇಲೆ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಆತನ ಮೇಲೆ ಇನ್ಸ್‌ಪೆಕ್ಟರ್ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಗಾಯಗೊಂಡಿದ್ದ ಅಲಗುರಾಜ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಗಾಯಗೊಂಡ ಇನ್ಸ್‌ಪೆಕ್ಟರ್‌ನ್ನು ಪೆರಂಬಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲಗುರಾಜ ವಿರುದ್ಧ ಹಲವಾರು ಪ್ರಕರಣಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಜನರನ್ನು ಬಂಧಿಸಲಾಗಿದೆ.
ಜ.24 ರಂದು, ಪೊಲೀಸರ ತಂಡವು ತಮಿಳುನಾಡಿನ ದಿಂಡಿಗಲ್‌ನಿಂದ ಪುಝಲ್ ಕೇಂದ್ರ ಕಾರಾಗೃಹಕ್ಕೆ ಕುಖ್ಯಾತ ಅಪರಾಧಿ ವೆಳ್ಳಕಲಿ ಎಂಬಾತನನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಪೆರಂಬಲೂರು ಬಳಿ ಗ್ಯಾಂಗ್ ಪೊಲೀಸ್ ವಾಹನದ ಮೇಲೆ ಕಂಟ್ರಿ ಬಾಂಬ್‌ಗಳನ್ನು ಎಸೆದಿತ್ತು. ಈ ದಾಳಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದರು.






