ಮಳೆ ಪೀಡಿತ, ಹಾನಿಗೊಳಗಾದ ಪ್ರದೇಶಕ್ಕೆ ಸಿಎಂ, ಎಚ್‌ಡಿಕೆ ಭೇಟಿ

Views: 28
ಬೆಂಗಳೂರು,ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿ ಗುಡ್ಡ ಕುಸಿತ, ಮನೆ ಕುಸಿತ ಸೇರಿದಂತೆ ಅನೇಕ ಅವಘಡಗಳು ಸಂಭವಿಸಿ ಜನ ತೊಂದರೆಗೆ ಸಿಲುಕಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತೊಂದರೆಗೊಳಗಾಗಿರುವ ಜನರಿಗೆ ಸಾಂತ್ವನ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಂಕೋಲಾದ ಶಿರೂರಿನ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.ಇದೇ ಪ್ರದೇಶಕ್ಕೆ ನಿನ್ನೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಹ ಭೇಟಿ ನೀಡಿದ್ದರು. ಇಂದು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಇವರುಗಳು ಹಾಸನ ಜಿಲ್ಲೆಯ ಸಕಲೇಶಪುರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಸಾಂತ್ವನ ಹೇಳಿದರು.ಮಳೆ ಪೀಡಿತ ಪ್ರೇಶಗಳಲ್ಲಿ ತೊಂದರೆಗೊಳಗಾಗಿರುವ ಜನರ ನೆರವಿಗೆ ಸರ್ಕಾರ ಸ್ಪಂದಿಸಬೇಕು ಎಂದು ಇವರುಗಳು ಆಗ್ರಹಿಸಿದರು.ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಇಂದು ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಇಂದು ಅವರು ಉತ್ತರ ಕನ್ನಡ ಜಿಲ್ಲೆಯ ಉಳುವರೆ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಉಳುವರೆಯಲ್ಲಿ ಭೂಕುಸಿತದಿಂದ ಹಾನಿಗೋಗಾದ ಸಂತ್ರಸ್ತರ ಮನೆಗಳನ್ನು ವೀಕ್ಷಿಸಿದರು. ಇದಾದ ನಂತರ ಶಿರೂರಿನ ಭೂಕುಸಿತ ಪ್ರದೇಶಕ್ಕೂ ಭೇಟಿ ನೀಡಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಿದರು






