“ಸ್ವಾಮೀಜಿಯವರಿಗೆ ಹೇಳಿಕೊಟ್ಟು ಮಾತನಾಡಿಸಲಾಗಿದೆ” ಸಿಎಂ ಸಿದ್ದರಾಮಯ್ಯ ಆಡಿದ ಮಾತು ತೀವ್ರ ಚರ್ಚೆ..!

Views: 90
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಕು ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರ್ ಸ್ವಾಮೀಜಿ ಅವರಿಗೆ ಹೇಳಿಕೊಟ್ಟು ಹೇಳಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಸಚಿವರೊಂದಿಗೆ ಮಾತನಾಡಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸಂಪುಟದ ಹಲವು ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಿನ್ನೆ ಮಧ್ಯಾಹ್ನ ಕೇಂದ್ರ ಗೃಹಸಚಿವ ಅಮಿತ್ ಷಾ ಅವರನ್ನು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಭೇಟಿ ಮಾಡಿದ್ದರು. ಅಲ್ಲಿಂದ ವಾಪಸ್ ಬರುವಾಗ ಸಿದ್ದರಾಮಯ್ಯ ಅವರ ಜೊತೆ ಪರಮೇಶ್ವರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಲಿಫ್ಟ್ ನಲ್ಲಿದ್ದರು. ಆಗ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ಹೇಳಿಕೆಯನ್ನು ಪ್ರಸ್ತಾಪಿಸಲಾಗಿದೆ.
ಸ್ವಾಮೀಜಿಯವರಿಗೆ ಹೇಳಿಕೊಟ್ಟು ಮಾತನಾಡಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರೆ, ಅದಕ್ಕೆ ಸಚಿವ ಪರಮೇಶ್ವರ್ ಹೌದು ಎಂಬಂತೆ ತಲೆಯಾಡಿಸಿದ್ದಾರೆ. ಈ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯ ಕಾರ್ಯಕ್ರಮದ ವೇದಿಕೆಯಲ್ಲಿ ಚಂದ್ರಶೇಖರ ಸ್ವಾಮೀಜಿ ಅಧಿಕಾರ ಬಿಟ್ಟುಕೊಡಿ ಎಂದು ಸಿದ್ದರಾಮಯ್ಯನವರಿಗೆ ಹೇಳುತ್ತಿದ್ದಂತೆ ವಾತಾವರಣವೇ ಬದಲಾಯಿತು. ವೇದಿಕೆಯಲ್ಲಿದ್ದ ಸಿದ್ದರಾಮಯ್ಯನವರ ಮುಖಚರ್ಯೆ ಬದಲಾಗಿತ್ತು.
ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಮಾಧ್ಯಮದವರ ಪ್ರಶ್ನೆಗೆ ಅಸಹನೆಯಿಂದಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ನಮ್ಮದು ಪ್ರಜಾಪ್ರಭುತ್ವದ ದೇಶ. ಕಾಂಗ್ರೆಸ್ ಹೈಕಮಾಂಡ್‌ನ ಪಕ್ಷ. ಪಕ್ಷದ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದರು.
ಅದರ ಬೆನ್ನಲ್ಲೇ ಮೊದಲಿನಿಂದಲೂ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಯ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದ ಕೆ.ಎನ್.ರಾಜಣ್ಣ ಸಿದ್ದರಾಮಯ್ಯನವರ ಪರವಾಗಿ ಬ್ಯಾಟಿಂಗ್ ಮಾಡಿದ್ದರು.
ಈ ವಿಚಾರಗಳು ವ್ಯಾಪಕ ಚರ್ಚೆಯಾಗುತ್ತಿರುವ ನಡುವೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರ ನಡುವಿನ ಸಂಭಾಷಣೆ ಕುತೂಹಲ ಕೆರಳಿಸಿದೆ. ಕೆಂಪೇಗೌಡ ಜಯಂತಿ ಮುಗಿದ ಬೆನ್ನಲ್ಲೇ ಅವರಿಬ್ಬರು ದೆಹಲಿಗೆ ತೆರಳಿದರು. ಅಲ್ಲಿ ಜೊತೆ ಜೊತೆಯಾಗಿಯೇ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯನವರು ಸ್ವಾಮೀಜಿಯವರ ಹೇಳಿಕೆ ವಿಷಯವಾಗಿ ಅನುಮಾನ ವ್ಯಕ್ತಪಡಿಸಿರುವುದು ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ಬಿಂಬಿಸುತ್ತಿದೆ.
ಮೇಲ್ನೋಟಕ್ಕೆ ಎಲ್ಲರೂ ಒಟ್ಟಾಗಿದ್ದೇವೆ, ಭಿನ್ನಮತ ಇಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ ಒಳಗೊಳಗೆ ಒಬ್ಬರ ಮೇಲೆ ಮತ್ತೊಬ್ಬರು ಮಸಲತ್ತು ನಡೆಸುತ್ತಿರುವಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು, ಇನ್ನು ಮುಂದೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಯಾರಾದರೂ ಬಹಿರಂಗ ಹೇಳಿಕೆ ನೀಡಿದರೆ ನೋಟಿಸ್ ನೀಡುವುದಾಗಿ ಎಚ್ಚರಿಸಿದ್ದಾರೆ.






