ಉಡುಪಿ :ಪ್ರೇತಗಳಿಗೆ ಮದುವೆ ಇದೀಗ ಸಕಾಲ

Views: 132
ಉಡುಪಿ:ಹಿಂದೂ ಸಂಪ್ರದಾಯದಲ್ಲಿ ಶೋಡಶ ಸಂಸ್ಕಾರಕ್ಕೆ ಅತ್ಯಂತ ಮಹತ್ವವಿದೆ. ಅದರಲ್ಲೂ ಶೋಡಶ ಸಂಸ್ಕಾರದಲ್ಲಿ ಬರುವ ವಿವಾಹಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಹುಟ್ಟಿನಿಂದ ಸಾಯುವ ದಿನದ ಒಳಗೆ ವಿವಾಹಿತನಾಗಿ ಸಂಸಾರ ಜೀವನ ನಡೆಸಬೇಕು ಎನ್ನುವುದು ಇಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನು ಈ ಶೋಡಶ ಸಂಸ್ಕಾರದ ಪ್ರಮುಖ ಅಂಗವಾಗಿರುವ ವಿವಾಹವು ಮರಣ ನಂತರವೂ ಕೂಡ ಬೇಕು ಎನ್ನುವುದಕ್ಕೆ ಪ್ರೇತ ಮದುವೆ ಸಾಕ್ಷಿ. ಹಾಗಾದರೆ ಏನಿದು ಪ್ರೇತ ಮದುವೆ.
ಇದು ನಿಜ ಎನ್ನಲು ಸಾಕ್ಷಿ ದೇವಾಲಯಗಳ ನಗರಿ ಬಾರಕೂರಿನಲ್ಲಿ ಸಿಗುತ್ತದೆ. ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂರಾರು ವರ್ಷದಿಂದ ಪ್ರತೀ ಅಮಾವಾಸ್ಯೆಯ ದಿನ ಪ್ರೇತಗಳ ಮದುವೆ ನಡೆಯುತ್ತದೆ.

ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪ್ರೇತ ವಿವಾಹ ಇಲ್ಲಿನ ಅರ್ಚಕ ಗಣಪತಿ ಉಡುಪ ಮತ್ತು ಬಳಗದವರಿಂದ ನಡೆಯುತ್ತದೆ. ಆಕಸ್ಮಿಕ, ಅಕಾಲ ಮರಣಹೊಂದಿದ ಗಂಡು ಅಥವಾ ಹೆಣ್ಣುಗಳು ಅನೇಕ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳದೆ ಅಗೋಚರವಾಗಿ ಪ್ರೇತಗಳಾಗಿ ಇರುತ್ತದೆ ಮತ್ತು ಪ್ರಾಯ ಕಳೆದಂತೆ ಆಸೆಯನ್ನು ನೆರವೇರಿಸುವಂತೆ ಕುಟುಂಬವನ್ನು ಕಾಡುತ್ತಾ ಇದ್ದು ಪೀಡನೆ ನೀಡುತ್ತಿರುವುದಕ್ಕೆ ಪ್ರೇತಗಳಿಗೆ ವಿವಾಹ ಶಾಸ್ತ್ರ ಮಾಡಿ ಬಳಿಕ ಸದ್ಗತಿ ಮಾಡಲಾಗುತ್ತದೆ.
ದೇವಸ್ಥಾನದ ಎದುರು ಭಾಗದಲ್ಲಿರಿರುವ ಶಂಖ ತೀರ್ಥ ಸರೋವರದಲ್ಲಿ ಪ್ರೇತವನ್ನು ಆಕರ್ಷಿಸಿ ಇರಿಸಲಾದ ತೆಂಗಿನ ಕಾಯಿ ಮೂಲಕ ನಾನಾ ಕರ್ಮಾಂಗ ಮಾಡಿ ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ 2 ತೆಂಗಿನ ಗಿಡಕ್ಕೆ ಗಂಡು ಹೆಣ್ಣಿಗೆ ಮಧುವಣಗಿತ್ತಿಗೆ ಅಲಂಕಾರ ಮಾಡಿದಂತೆ ಸೀರೆ ಪಂಚೆ ಶಾಲು ಕಾಲುಂಗುರ ಕರಿಮಣೆ ನೀಡಿ ಬೇರೆ ಗೋತ್ರ ಅಥವಾ ಬಳಿಯವರೊಂದಿಗೆ ತಾಂಬೂಲ ಬದಲಾವಣೆ ಮಾಡಿ ಬಳಿಕ ಮದುವೆ ಶಾಸ್ತ್ರ ಮಾಡಲಾಗುತ್ತದೆ. ಬಳಿಕ ತೆಂಗಿನಕಾಯಿಯಲ್ಲಿ ಆವಾಹನೆ ಮಾಡಲಾದ ಪ್ರೇತವನ್ನು ಮತ್ತೊಂದು ತೆಂಗಿನ ಕಾಯಿಜೊತೆ ಅವರಿಗೆ ಸಂಬಂಧಿಸಿದ ದೈವಸ್ಥಾನದಲ್ಲಿ ಒಡೆಯಲಾಗುತ್ತದೆ.
ಇದು ನೂರಾರು ವರ್ಷದಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿಯಾಗಿದ್ದು ವಿಜ್ಞಾನಯುಗದಲ್ಲೂ ಮುಂದುವರಿಯುತ್ತಿದೆ. ಇಂದಿಗೂ ಕೂಡ ಸಮಸ್ಯೆಯಿಂದ ಸಂತ್ರಸ್ಥರಾದವರು ಇಲ್ಲಿ ಪ್ರೇತಗಳ ವಿವಾಹಗಳ ಮಾಡುವ ಮೂಲಕ ನೆಮ್ಮದಿ ಕಾಣುತ್ತಿರುವುದು ಆಧುನಿಕ ಜಗತ್ತಿಗೆ ಸವಾಲು






