ಕೃಷಿ

ಕೇರಳಕ್ಕೆ ಮುಂಗಾರು ಪ್ರವೇಶ.. ಕರ್ನಾಟಕಕ್ಕೆ ಯಾವಾಗ?

Views: 174

ಬೆಂಗಳೂರು: ‘ರೆಮಲ್‌’ ಚಂಡಮಾರುತದ ಪರಿಣಾಮ ಈ ವರ್ಷ ನೈರುತ್ಯ ಮುಂಗಾರು ಕೇರಳ ಹಾಗೂ ಈಶಾನ್ಯ ಭಾರತಕ್ಕೆ ಏಕಕಾಲಕ್ಕೆ ಗುರುವಾರ ಅಧಿಕೃತವಾಗಿ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಮುಂಗಾರು ಪೂರ್ವ ಮಳೆಯಿಂದ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಮುಂಗಾರು ಆಗಮನ ರೈತರಿಗೆ ಖುಷಿ ಕೊಟ್ಟಿದೆ. ರಾಜ್ಯದ ಕರಾವಳಿ ಭಾಗಕ್ಕೆ ಜೂನ್‌ 2ರಂದು ಮಾನ್ಸೂನ್‌ ಆಗಮಿಸಲಿದೆ ಎಂದು ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಜೂನ್‌ 1ರಂದು ಕೇರಳಕ್ಕೆ ಹಾಗೂ ಜೂನ್‌ 5ರಂದು ಈಶಾನ್ಯ ಭಾರತಕ್ಕೆ ಮುಂಗಾರು ಪ್ರವೇಶಿಸುತ್ತದೆ. ಆದರೆ ಈ ಬಾರಿ ‘ರೆಮಲ್‌’ ಚಂಡಮಾರುತದ ಪರಿಣಾಮದ ಹವಾಮಾನ ಬದಲಾವಣೆಯಿಂದ 2 ದಿನ ಮುಂಚಿತವಾಗಿಯೇ ಮುಂಗಾರು ಮಾರುತಗಳು ಭಾರತ ಪ್ರವೇಶಿಸಿವೆ. ಜೂನ್‌ ಮಧ್ಯಭಾಗದ ಹೊತ್ತಿಗೆ ಇಡೀ ದೇಶವನ್ನು ಆವರಿಸಿಕೊಳ್ಳಲಿದೆ. ಈಗಾಗಲೇ ಇಲಾಖೆಯು ಈ ಬಾರಿಯ ಜೂನ್‌-ಸೆಪ್ಟೆಂಬರ್‌ ಮುಂಗಾರು ಋುತುವಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿಯಲಿದೆ ಎಂದು ಅಂದಾಜಿಸಿದೆ.

ಕೇರಳ ಹಾಗೂ ಈಶಾನ್ಯ ಭಾರತದ ಮಣಿಪುರ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಪೂರ್ವ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜೂನ್‌ 2ರವರೆಗೂ ಕೇರಳದಲ್ಲಿ ಭಾರಿ ಮಳೆಯಾಗಲಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Related Articles

Back to top button