ಕೃಷಿ

ಕೇಂದ್ರ ಬಜೆಟ್ ಮಂಡನೆ:ಪಿಎಂ ಕಿಸಾನ್ ಸಮ್ಮಾನ್ ನಿಧಿ ವಾರ್ಷಿಕ 6,000 ರೂ.ನಿಂದ 9,000 ರುಪಾಯಿಗೆ ಹೆಚ್ಚಿಸುವ ಸಾಧ್ಯತೆ!

Views: 56

ಕನ್ನಡ ಕರಾವಳಿ ಸುದ್ದಿ:ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಎನ್‌ಡಿಎ ಸರ್ಕಾರದ 3ನೇ ಅವಧಿಯಲ್ಲಿ ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಈ ಬಾರಿ ಸತತ 9ನೇ ಅವಧಿಗೆ ಕೇಂದ್ರ ಮುಂಗಡಪತ್ರವನ್ನು ಸಂಸತ್‌ನಲ್ಲಿ ಮಂಡಿಸಲಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಿಗುವ ಸಾಧ್ಯತೆ ಇದೆ. ಈ ಬಾರಿ ‘ವಿಕಸಿತ ಭಾರತ-2027’ರತ್ತ ಗುರಿಯಾಗಿಸಿಕೊಂಡು ಬಜೆಟ್ ಸಿದ್ಧಪಡಿಲಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಹೆಚ್ಚಿಸುವ ನೀರಿಕ್ಷೆ ಇದೆ.

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಸುಮಾರು 9 ಕೋಟಿ ಫಲಾನುಭವಿಗಳಿದ್ದು, ಈ ಬಾರಿಯ ಬಜೆಟ್ ಮೂಲಕ ಮೋದಿ ಸರ್ಕಾರ ಅವರಿಗೆ ಗಡ್‌ನ್ಯೂಸ್ ನೀಡಲಿದೆ ಎನ್ನಲಾಗಿದೆ.

ಹಣಕಾಸಿನ ನೆರವನ್ನು ವಾರ್ಷಿಕ 6,000 ರುಪಾಯಿಯಿಂದ 9,000 ರುಪಾಯಿಗೆ ಹೆಚ್ಚಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆ ವೇಳೆ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಕರ್ಪೂರಿ ಠಾಕೂ‌ರ್ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಈ ಯೋಜನೆಯಡಿ ಪಿಎಂ ಕಿಸಾನ್ ಫಲಾನುಭವಿಗಳು ವಾರ್ಷಿಕವಾಗಿ ಹೆಚ್ಚುವರಿಯಾಗಿ 3,000 ರುಪಾಯಿ ಪಡೆಯಲಿದ್ದಾರೆ. ಇದೀಗ ಕೇಂದ್ರ ಸರ್ಕಾರವೇ ದೇಶಾದ್ಯಂತ ಧನ ಸಹಾಯದ ಮೊತ್ತವನ್ನು 9,000 ರುಪಾಯಿಗೆ ಹೆಚ್ಚಿಸಬಹುದು ಎಂಬ ನಿರೀಕ್ಷೆ ಮೂಡಿದೆ.

ಕೇಂದ್ರ ಸರ್ಕಾರ 4 ತಿಂಗಳಿಗೆ 2 ಸಾವಿರ ರುಪಾಯಿಯಂತೆ ವರ್ಷಕ್ಕೆ 6,000 ರುಪಾಯಿ ಒದಗಿಸುತ್ತಿದೆ. ಅದರ ಜತೆಗೆ ಹಲವು ರಾಜ್ಯಗಳು ರೈತರಿಗೆ ಹೆಚ್ಚುವರಿ ಧನ ಸಹಾಯ ನೀಡುತ್ತಿವೆ. ಮಧ್ಯ ಪ್ರದೇಶ (ಸಿಎಂ ಕಿಸಾನ್ ಕಲ್ಯಾಣ್‌ ಯೋಜನೆ) ಮತ್ತು ಮಹಾರಾಷ್ಟ್ರ (ನಮೋ ಶೇತ್ಕರಿ ಯೋಜನೆ) ಸರ್ಕಾರಗಳು ಪಿಎಂ ಕಿಸಾನ್ ಫಲಾನುಭವಿಗಳಿಗೆ ತಲಾ 6,000 ರುಪಾಯಿ ಹೆಚ್ಚುವರಿಯಾಗಿ ನೀಡುತ್ತವೆ. ಛತ್ತೀಸ್‌ಗಢ, ಒಡಿಶಾ, ಆಂಧ್ರ ಪ್ರದೇಶ ಮತ್ತು ರಾಜಸ್ಥಾನದ ರೈತರಿಗೂ ಹೆಚ್ಚುವರಿ ಸಹಾಯ ಒದಗಿಸಲಾಗುತ್ತಿದೆ.

ಫೆಬ್ರವರಿಯಲ್ಲಿ 22ನೇ ಕಂತು

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಸರ್ಕಾರ ಪ್ರತಿ ವರ್ಷ 3 ಕಂತುಗಳಲ್ಲಿ ಒಟ್ಟು 6,000 ರುಪಾಯಿ ರೈತರಿಗೆ ನೀಡುತ್ತಿದೆ. ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಹಾಯದ ಮೊತ್ತವನ್ನು ಹೆಚ್ಚಿಸುವುದಾಗಿ ಘೋಷಿಸಿದರೆ, ಫೆಬ್ರವರಿಯಲ್ಲಿ ಬರಲಿರುವ 22ನೇ ಕಂತಿನಲ್ಲಿ ಹೆಚ್ಚುವರಿ ಹಣ ಲಭಿಸಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಬಜೆಟ್‌ನಲ್ಲಿ ಈ ಘೋಷಣೆ ಮಾಡಿದರೂ, ಅಧಿಸೂಚನೆ ಹೊರಡಿಸಬೇಕಾಗಿರುವುದರಿಂದ ಅದರ ಅನುಷ್ಠಾನಕ್ಕೆ ಸಮಯ ತೆಗೆದುಕೊಳ್ಳಬಹುದು ಎನ್ನವ ವಾದವೂ ಇದೆ. 22ನೇ ಕಂತು ಫೆಬ್ರವರಿ ಅಂತ್ಯಕ್ಕೆ ರೈತರ ಕೈ ಸೇರುವ ಸಾಧ್ಯತೆ ಇದೆ.

Related Articles

Back to top button
error: Content is protected !!