ಕುಂದಾಪುರ: ಪರಿಸರ ಪ್ರೇಮಿ, ಕೃಷಿಕ ಕಿಶನ್ ಕುಮಾರ್ ಕೆಂಚನೂರು ಹೃದಯಾಘಾತದಿಂದ ಸಾವು
Views: 142
ಕನ್ನಡ ಕರಾವಳಿ ಸುದ್ದಿ :ಪರಿಸರ ಪ್ರೇಮಿ, ಸ್ವಯಂ ಕೃಷಿಕ ಬಸ್ರೂರು ಮನೆ ಕಿಶನ್ ಕುಮಾರ್ ಕೆಂಚನೂರು (65) ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಿಶನ್ ಅವರು ಭಾನುವಾರ ರಾತ್ರಿ ಕುಂದಾಪುರದಲ್ಲಿ ನಡೆದ ಇನಿದನಿ ಕಾರ್ಯಕ್ರಮ ವೀಕ್ಷಿಸಿ ಮನೆಗೆ ತೆರಳಿದ್ದರು. ನಸುಕಿನ ಜಾವ ಹೃದಯಾಘಾತವಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ತೀವ್ರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಿಶನ್ ಕೆಂಚನೂರು ಅವರು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಗೇರು ಕೃಷಿಯ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದ ಅವರು ಗೇರು, ಭತ್ತ ಮತ್ತು ಅಡಿಕೆ ಕೃಷಿಗಳ ಬಗ್ಗೆ ಸಾಕಷ್ಟು ಕಾರ್ಯಾಗಾರಗಳನ್ನು ನಡೆಸಿದ್ದರು. ವಿವಿಧ ಭತ್ತದ ತಳಿಗಳನ್ನು ಬೆಳೆದು ಭತ್ತದ ಕೃಷಿಕರಿಗೆ ಮಾರ್ಗದರ್ಶನ ನೀಡಿದ್ದರು. ಪರಿಸರ ನಾಶದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದ ಕಿಶನ್ ಕೆಂಚನೂರು, ಕಸ್ತೂರಿರಂಗನ್ ವರದಿಯ ಅಮೂಲಾಗ್ರ ಅಧ್ಯಯನ ನಡೆಸಿ ಅದರ ಸಾಧಕ ಬಾಧಕಗಳ ಬಗ್ಗೆ ಹಲವಾರು ಸೆಮಿನಾರುಗಳನ್ನು ನಡೆಸಿದ್ದರು.
ಟಿವಿ ಚಾನೆಲ್ಲುಗಳಲ್ಲಿಯೂ ಹಲವಾರು ಸಂಸದರ್ಶನಗಳನ್ನು ನೀಡಿದ್ದ ಕಿಶನ್ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ.
ಪತ್ನಿ ಪುತ್ರಿಯನ್ನು ಅಗಲಿದ್ದಾರೆ. ಮೃತದೇಹವನ್ನು ಕೆಂಚನೂರಿನಲ್ಲಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.






