ಕೃಷಿ

ತ್ಯಾಜ್ಯವೆಂದು ಬಿಸಾಡುತ್ತಿದ್ದ ತೆಂಗಿನಕಾಯಿ ಚಿಪ್ಪಿಗೂ ಭಾರಿ ಬೇಡಿಕೆ :ಮನೆ ಬಾಗಿಲಿಗೆ ಬಂದು ಖರೀದಿ!

Views: 235

ಕನ್ನಡ ಕರಾವಳಿ ಸುದ್ದಿ:ತೆಂಗಿನ ಮರವನ್ನು ‘ಕಲ್ಪವೃಕ್ಷ’ ಎಂದು ಕರೆಯುವುದಕ್ಕೆ ಅದರ ಪ್ರತಿಯೊಂದು ಭಾಗವೂ ಮನುಷ್ಯನಿಗೆ ಉಪಯುಕ್ತವಾಗಿವೆ. ಎಳನೀರು, ಕೊಬ್ಬರಿ, ಕೊಬ್ಬರಿ ಎಣ್ಣೆ, ತೆಂಗಿನಗರಿಯ ಪೊರಕೆ, ಚಾವಣಿಗೆ ಹೊದಿಸುವ ಗರಿ, ನೀರು ಕಾಯಿಸಲು ಬಳಸುವ ಮಟ್ಟೆ ಹೀಗೆ ಎಲ್ಲವೂ ಉಪಯೋಗಕ್ಕೆ ಬರುತ್ತದೆ. ಈಗ ಈ ಸಾಲಿಗೆ ಅದರ ಚಿಪ್ಪು ಕೂಡ ಸೇರಿದ್ದು, ಜನರಿಗೆ ಮತ್ತು ವ್ಯಾಪಾರಿಗಳಿಗೆ ಹೊಸ ಲಾಭದ ದಾರಿ ತೋರಿಸಿದೆ.

ಹಿಂದೆ ತ್ಯಾಜ್ಯವೆಂದು ಬಿಸಾಡುತ್ತಿದ್ದ ತೆಂಗಿನಕಾಯಿ ಚಿಪ್ಪಿಗೆ ಈಗ ಉತ್ತಮ ಬೆಲೆ ಬಂದಿದ್ದು, ವ್ಯಾಪಾರಿಗಳು ಮನೆ ಬಾಗಿಲಿಗೇ ಬಂದು ಖರೀದಿಸುತ್ತಿದ್ದಾರೆ.

ಹಿಂದೆ ತೆಂಗಿನಕಾಯಿ ಚಿಪ್ಪುಗಳನ್ನು ಕೇವಲ ಇದ್ದಿಲು ತಯಾರಿಸಲು ಅಥವಾ ಅಲಂಕಾರಿಕ ವಸ್ತುಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ, ಚಿಪ್ಪಿನಿಂದ ತಯಾರಿಸಿದ ಇದ್ದಿಲಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇದು ರಫ್ತು ಆಗುತ್ತಿರುವುದೇ ಬೆಲೆ ಏರಿಕೆಗೆ ಮುಖ್ಯ ಕಾರಣ.

ಇದರ ಜೊತೆಗೆ, ರೈತರು ಎಳನೀರು ಮಾರಾಟಕ್ಕೆ ಹೆಚ್ಚು ಒಲವು ತೋರುತ್ತಿರುವುದರಿಂದ, ಮಾರುಕಟ್ಟೆಗೆ ಬರುವ ಬಲಿತ ತೆಂಗಿನಕಾಯಿಗಳ ಸಂಖ್ಯೆ ಕಡಿಮೆಯಾಗಿದೆ. ಇದು ಕೂಡ ಚಿಪ್ಪಿನ ಕೊರತೆಗೆ ಕಾರಣವಾಗಿ, ಬೇಡಿಕೆಯನ್ನು ಹೆಚ್ಚಿಸಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಅಡುಗೆ ಒಲೆಗೆ ಉರಿಯಾಗಿ ಅಥವಾ ಕಸದ ಬುಟ್ಟಿಗೆ ಸೇರುತ್ತಿದ್ದ ತೆಂಗಿನ ಚಿಪ್ಪುಗಳು ಈಗ ಆದಾಯದ ಮೂಲವಾಗಿವೆ. ಈ ಬದಲಾವಣೆಯಿಂದಾಗಿ, ಮನೆಯ ಮಹಿಳೆಯರು ಚಿಪ್ಪುಗಳನ್ನು ಬಿಸಾಡದೆ  ಸಂಗ್ರಹಿಸಿಡುತ್ತಿದ್ದಾರೆ. ವ್ಯಾಪಾರಿಗಳು ಒಂದು ಚಿಪ್ಪಿಗೆ 1 ರೂಪಾಯಿಯಂತೆ ಅಥವಾ ತೂಕದ ಆಧಾರದ ಮೇಲೆ ಒಂದು ಕೆಜಿಗೆ 20 ರಿಂದ 22 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. ಹೀಗೆ ಮನೆಮನೆಗಳಿಂದ ಸಂಗ್ರಹಿಸಿದ ಚಿಪ್ಪುಗಳನ್ನು ಶೇಖರಿಸಿ, ತಿಪಟೂರು, ಅರಸೀಕೆರೆ ಸೇರಿದಂತೆ ಪ್ರಮುಖ ತೆಂಗು ಆಧಾರಿತ ಮಾರುಕಟ್ಟೆಗಳಿಗೆ ರವಾನಿಸಲಾಗುತ್ತಿದೆ.

 

Related Articles

Back to top button