ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆರಾಯನಿಗಾಗಿ ವಿಶೇಷ ಪ್ರಾರ್ಥನೆ..!

Views: 59
ರಾಜ್ಯದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ತಲೆಗೂರಿದೆ. ಇದರ ನಿವಾರಣೆಗೆ ಇಲ್ಲೊಂದು ಗ್ರಾಮಸ್ಥರು ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ಮಳೆರಾಯನಿಗಾಗಿ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಗಮನಸೆಳೆದರು.
ಸದ್ಯ ಮಳೆಗಾಗಿ ಇಡೀ ರಾಜ್ಯವೇ ಕಾದು ಕೂತಿದೆ. ಮಳೆಗಾಗಿ ಪ್ರಾರ್ಥನೆ ಮಾಡಿ ಪೂಜೆ, ಹೋಮ, ಹವನ ಕೂಡ ಮಾಡಲಾಗುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಕತ್ತೆಗಳಿಗೆ ಮಾಂಗಲ್ಯ ಕಟ್ಟಿಸಿ ಅಕ್ಷತೆ ಹಾಕಿ ಆರತಿ ಬೆಳಗಿಸಿ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿ ಮಳೆರಾಯನಿಗಾಗಿ ಪ್ರಾರ್ಥಿಸುತ್ತಾರೆ. ಆದರೆ, ಇಲ್ಲೊಂದು ಗ್ರಾಮಸ್ಥರು ಮಳೆಗಾಗಿ ಪ್ರಾರ್ಥನೆ ಮಾಡಿ ಕಪ್ಪೆಗಳಿಗೆ ಮದುವೆ ಮಾಡಿಸಿದ್ದಾರೆ.
ಬರ ನಿವಾರಣೆಗೆ ಮಂಡ್ಯ ಜಿಲ್ಲೆಯ ಕೆ.ಪಿ. ದೊಡ್ಡಿ ಗ್ರಾಮದವರು ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ಮಳೆರಾಯನಿಗಾಗಿ ವಿಶೇಷವಾಗಿ ಪ್ರಾರ್ಥನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಸ್ತುತದಲ್ಲಿ ಎದುರಾಗಿರುವ ಭೀಕರ ಬರಗಾಲ ತಪ್ಪಿಸಲು ಹಾಗೂ ಶೀಘ್ರದಲ್ಲಿ ಉತ್ತಮ ಮಳೆಗಾಗಿ ಗ್ರಾಮೀಣ ಪ್ರದೇಶದ ಆಚರಣೆಯಾದ ಕಪ್ಪೆಗಳಿಗೆ ಮದುವೆ ಮಾಡಿ ಮಳೆರಾಯನ ಮೊರೆ ಹೋಗಿದ್ದಾರೆ. ಗ್ರಾಮದ ಯುವಕರೆಲ್ಲಾ ಸೇರಿ ವಿಶೇಷ ಪೂಜೆ ಮಾಡಿದ್ದಾರೆ.
ಇವರು, ಮಳೆರಾಯನ ಆಗಮನಕ್ಕೆ ಹಾಗೂ ಶೀಘ್ರವಾಗಿ ಉತ್ತಮ ಮಳೆಯಾಗಿ ನಾಡು ಎದುರಿಸುತ್ತಿರುವ ಭೀಕರ ಬರ ತೊಲಗಲಿ ಎಂದು ವಿಶೇಷವಾಗಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಕೈಗೊಂಡು ವಿಶಿಷ್ಟವಾಗಿ ಜೋಡಿ ಕಪ್ಪೆಗಳಿಗೆ ಮದುವೆ ಮಾಡಿ ಗ್ರಾಮಸ್ಥರ ಜೊತೆಗೂಡಿ ಅನ್ನ ಸಂತರ್ಪಣೆ ನಡೆಸಲಾಯಿತು.
ಕೆ.ಪಿ.ದೊಡ್ಡಿ ಹಾಗೂ ಮಣಿಗೆರೆ ಹಾಗೂ ಸುತ್ತಮುತ್ತಲಿನ ಸುಮಾರು 500ಕ್ಕೂ ಹೆಚ್ಚಿನ ಜನರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ, ಮಳೆಗಾಗಿ ಪ್ರಾರ್ಥನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.






