ಹಕ್ಕುಗಳ ಉಲ್ಲಂಘನೆ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರೈತರು
Views: 27
ಕೇಂದ್ರ ಸರಕಾರ ಮತ್ತು ಕೆಲವು ರಾಜ್ಯಗಳ ಸರಕಾರಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಹಕ್ಕುಗಳ ಉಲ್ಲಂಘನೆಯನ್ನು ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಗಡಿಯಲ್ಲಿನ ಎಲ್ಲಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಬೇಕು ಮತ್ತು ದೆಹಲಿಗೆ ಪಾದಯಾತ್ರೆ ನಡೆಸುತ್ತಿರುವ ರೈತರ ಮೇಲಿನ ಹಿಂಸಾಚಾರವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಮನವಿಯಲ್ಲಿ ಪೊಲೀಸರಿಂದ ಆಪಾದಿತ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವರದಿ ಕೇಳಲಾಗಿದೆ ಮತ್ತು ಪ್ರತಿಭಟನೆಯಲ್ಲಿ ಗಾಯಗೊಂಡ ರೈತರು ಮತ್ತು ಅವರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ. ಹರ್ಯಾಣ, ಪಂಜಾಬ್, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಸರ್ಕಾರಗಳು ರೈತರ ವಿರುದ್ಧ ಅಶ್ರುವಾಯು, ರಬ್ಬರ್ ಗುಂಡುಗಳು ಮತ್ತು ಬುಲೆಟ್‌ಗಳ ಬಳಕೆ ಮೂಲಕ ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಕ್ರಮಗಳನ್ನು ಅನುಸರಿಸಿವೆ ಮತ್ತು ರೈತರಿಗೆ ಗಂಭೀರ ಗಾಯಗಳಾಗಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹಲವಾರು ರೈತ ಸಂಘಗಳು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿಗಾಗಿ ಮತ್ತು ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕಾಗಿ ಪ್ರತಿಭಟನೆಗಳಿಗೆ ಕರೆ ನೀಡಿದ ನಂತರ ಕೇಂದ್ರ ಮತ್ತು ಕೆಲವು ರಾಜ್ಯಗಳು ಬೆದರಿಕೆ ಹಾಕಿವೆ ಮತ್ತು ರಾಷ್ಟ್ರ ರಾಜಧಾನಿಯ ಗಡಿಯನ್ನು ಬಂದ್ ಮಾಡಿ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಶಾಂತಿಯುತ ಪ್ರತಿಭಟನೆಯಲ್ಲಿ ಅನ್ಯಾಯವನ್ನು ಎದುರಿಸುತ್ತಿರುವ ರೈತರ ಹಿತಾಸಕ್ತಿ ಕಾಪಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ ಎಂದು ಸಿಖ್ ಚೇಂಬರ್ ಆಫ್ ಕಾಮರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಗ್ನೋಸ್ಟೋಸ್ ಥಿಯೋಸ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಕೆಲವು ಪ್ರತಿಭಟನಾಕಾರರನ್ನು ಬಲವಂತವಾಗಿ ಬಂಧಿಸಲಾಗಿದೆ, ಸಾಮಾಜಿಕ ಮಾದ್ಯಮ ಖಾತೆಗಳನ್ನು ನಿರ್ಬಂಧಿಸುವುದು, ರಸ್ತೆಗಳನ್ನು ನಿರ್ಬಂಧಿಸುವುದು ಸೇರಿದಂತೆ ಕೇಂದ್ರವು ಅನಗತ್ಯವಾಗಿ ನಿಷೇಧಿತ ಕ್ರಮಗಳನ್ನು ಕೈಗೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಘರ್ಷಣೆಯಿಂದ ರೈತರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣಕ್ಕೆ ವೈದ್ಯಕೀಯ ಸೇವೆ ಸಿಗದೆ ಗಾಯಾಳುಗಳ ಸಾವುಗಳು ಸಂಭವಿಸಿದೆ. ದೆಹಲಿಯ ಗಡಿಯಲ್ಲಿನ ನಿರ್ಮಿಸಿರುವ ಕೋಟೆಗಳು ಪ್ರತಿಕೂಲ ಮತ್ತು ಹಿಂಸಾತ್ಮಕ ಪರಿಸ್ಥಿತಿಯನ್ನು ಸೃಷ್ಟಿಸಿವೆ ಮತ್ತು ರೈತರು ತಮ್ಮ ಪ್ರತಿಭಟನೆಯ ಪ್ರಜಾಪ್ರಭುತ್ವ ಹಕ್ಕನ್ನು ಚಲಾಯಿಸಲು ಅನುಮತಿಸಲಾಗುತ್ತಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ರೈತರು ತಮ್ಮ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಹಕ್ಕುಗಳ ಅನುಷ್ಠಾನಕ್ಕಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವಾಗ ತಮ್ಮದೇ ಸರ್ಕಾರ ಅವರನ್ನು ಭಯೋತ್ಪಾದಕರ ರೀತಿ ನಡೆಸಿಕೊಳ್ಳುತ್ತಿದೆ. ಅರ್ಜಿಯಲ್ಲಿ ಕೇಂದ್ರ ಸರಕಾರ, ನಾಲ್ಕು ರಾಜ್ಯಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಪ್ರತಿಭಟಿಸುವ ರೈತರನ್ನು ನ್ಯಾಯಯುತ ಮತ್ತು ಗೌರವಯುತವಾಗಿ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡುವಂತೆ ಆಗ್ರಹಿಸಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಆರೋಪಿಸಲಾಗಿದ್ದು, ಸಂತ್ರಸ್ತ ರೈತರು ಮತ್ತು ಅವರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಕೂಡ ಆಗ್ರಹಿಸಲಾಗಿದೆ.