ರೈತರಿಗೆ ಗುಡ್ ನ್ಯೂಸ್.. ಸೋಲಾರ್ ಪಂಪ್‍ಸೆಟ್‍ಗೆ ಆದ್ಯತೆ/ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್/ಅಕ್ರಮ-ಸಕ್ರಮ ರದ್ದು: ಬೆಸ್ಕಾಂ ಎಂಡಿ
Views: 60
ದಾವಣಗೆರೆ: ಸರ್ಕಾರದ ಸೂಚನೆಯಂತೆ ಬೆಸ್ಕಾಂ ರೈತರ ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಬದ್ದವಾಗಿದ್ದು, ಮಳೆಯ ಕೊರತೆಯ ನಡುವೆ ಬೇಸಿಗೆ ನಿರ್ವಹಣೆಗಾಗಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಅಕ್ರಮ-ಸಕ್ರಮ ಯೋಜನೆ ಸ್ಥಗಿತಗೊಳಿಸಲಾಗಿದ್ದು, ಇನ್ಮುಂದೆ ಸೋಲಾರ್ ಪಂಪ್‍ಸೆಟ್‍ಗೆ ಆದ್ಯತೆ ನೀಡಲಾಗುವುದು ಎಂದು ಬೆಸ್ಕಾಂ ಎಂ.ಡಿ. ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳೊಂದಿಗೆ ದಾವಣಗೆರೆ ಜಿಲ್ಲಾ ಬೆಸ್ಕಾಂ ಕುಂದು ಕೊರತೆಯ ಸಭೆಯಲ್ಲಿ ಮಾತನಾಡಿದರು.
ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ರೈತರಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂಬ ಭರವಸೆಯಿಂದ ಬೆಳೆಗಳನ್ನು ಹಾಕಿರುವರು. ಎಷ್ಟು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗಲಿದೆ ಎಂದು ರೈತರಿಗೆ ನಿಖರವಾಗಿ ತಿಳಿಸಿದಲ್ಲಿ ವಿದ್ಯುತ್ ಪೂರೈಕೆಯನ್ನಾಧರಿಸಿ ಬೆಳೆಯನ್ನು ಬೆಳೆಯುತ್ತಾರೆ ಎಂದಾಗ ಬೆಸ್ಕಾಂ ಎಂ.ಡಿ.ಯವರು ಕಳೆದ ಅಕ್ಟೋಬರ್ ತಿಂಗಳಲ್ಲಿ ವಿದ್ಯುತ್ ಕೊರತೆಯಾಗಿದ್ದರಿಂದ ವ್ಯತ್ಯಯವಾಗಿದ್ದು ಮುಂದಿನ ದಿನಗಳಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ದವಾಗಿದೆ ಎಂದರು.
ಸೋಲಾರ್ ಪಂಪ್‍ಸೆಟ್‍ಗೆ ಆದ್ಯತೆ; ರೈತರ ಪಂಪ್‍ಸೆಟ್‍ಗಳ ಅಕ್ರಮ ಸಕ್ರಮ ಯೋಜನೆಯನ್ನು 2023 ರ ಸೆಪ್ಟೆಂಬರ್ 22 ಕ್ಕೆ ನೊಂದಣಿಯನ್ನು ಸ್ಥಗಿತಗೊಳಿಸಲಾಗಿದೆ. 500 ಮೀಟರ್ ವ್ಯಾಪ್ತಿಯ ಒಳಗೆ ಇರುವ ಪಂಪ್ ಸೆಟ್‍ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ವಿದ್ಯುತ್ ಸಂಪರ್ಕ ಸಕ್ರಮ ಮಾಡಲಾಗುತ್ತದೆ. 500 ಮೀಟರ್‍ಗಿಂತ ಹೆಚ್ಚಿದ್ದಲ್ಲಿ ಸೋಲಾರ್ ಪಂಪ್‍ಸೆಟ್ ಅಳವಡಿಕೆಗೆ ಪ್ರೋತ್ಸಾಹಿಸಲಾಗುತ್ತದೆ. ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಪಿಎಂ ಕುಸುಮ.ಬಿ ಯೋಜನೆಯಡಿ ಅವಕಾಶ ಇದ್ದು ಫಲಾನುಭವಿ ವಂತಿಗೆ ಶೇ 20 ರಷ್ಟು ಪಾವತಿಸಬೇಕು. ಈಗಾಗಲೇ ಮಹಾರಾಷ್ಟ್ರದಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು ಸಾವಿರ ಅಡಿ ಆಳ, ಎರಡು ಕಿ.ಮೀ ದೂರದವರೆಗೆ 7.5 ಹೆಚ್‍ಪಿ ಸೋಲಾರ್ ಪಂಪ್‍ಸೆಟ್ ನಿರಂತರವಾಗಿ ನೀರನ್ನು ತಳ್ಳುತ್ತದೆ. ಈ ಸ್ಥಳಗಳನ್ನು ಬೆಸ್ಕಾಂ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದಾಗ ರೈತರಿಗೆ ಜಾಗೃತಿ ಮೂಡಿಸಿದಲ್ಲಿ ರೈತರೇ ಅಳವಡಿಕೆಗೆ ಮುಂದಾಗುವರು ಎಂದು ಶಾಸಕರಾದ ಡಿ.ಜಿ.ಶಾಂತನಗೌಡ ಮತ್ತು ಬಸವಂತಪ್ಪ ತಿಳಿಸಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಯಡಿ ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಸೋಲಾರ್ ಅಳವಡಿಸಿ ಎಂದರು.
ಅಕ್ರಮ ಸಕ್ರಮಕ್ಕೆ 310 ಕೋಟಿ; 2023 ರ ಸೆಪ್ಟೆಂಬರ್ 22 ರೊಳಗಾಗಿ ಅಕ್ರಮ ಸಕ್ರಮದಲ್ಲಿ ನೊಂದಾಯಿಸಿದ ರೈತರ ಪಂಪ್‍ಸೆಟ್‍ಗಳನ್ನು ಸಕ್ರಮ ಮಾಡಲು ಈಗಾಗಲೇ ಟೆಂಡರ್ ಕರೆದು ಅನುಮೋದನೆ ನೀಡಿ ಜಿಲ್ಲೆಯಲ್ಲಿ ನೊಂದಾಯಿಸಿದ ಹರಪನಹಳ್ಳಿ ಮತ್ತು ತೆಲಗಿ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ 15615 ಪಂಪ್‍ಸೆಟ್‍ಗಳ ಸಕ್ರಮಕ್ಕಾಗಿ 310 ಕೋಟಿ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ಎಂ.ಡಿ.ಯವರು ತಿಳಿಸಿದರು.
ಸಭೆಯಲ್ಲಿ ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ.ರಮೇಶ್, ಮುಖ್ಯ ಇಂಜಿನಿಯರ್ ಗೋವಿಂದಪ್ಪ, ಕೆ.ಪಿ.ಟಿ.ಸಿ.ಎಲ್. ಮುಖ್ಯ ಇಂಜಿನಿಯರ್ ಉಮೇಶ್, ಅಧೀಕ್ಷಕ ಇಂಜಿನಿಯರ್ ಜಗದೀಶ್ ಹಾಗೂ ಬೆಸ್ಕಾಂ ಇಂಜಿನಿಯರ್‍ಗಳು ಸಭೆಯಲ್ಲಿ ಉಪಸ್ಥಿತರಿದ್ದರು.