ಬರದಿಂದಾಗಿ ಉತ್ಪಾದನೆ ಕುಸಿತ: ಕರ್ನಾಟಕದಲ್ಲಿ ಆಹಾರ ಧಾನ್ಯಗಳ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
Views: 1
ರಾಜ್ಯದಾದ್ಯಂತ ಈ ವರ್ಷ ಬರಗಾಲ ಪರಿಸ್ಥಿತಿ ಸೃಷ್ಟಿಯಾದ ಕಾರಣ ವಿವಿಧ ಬೆಳೆಗಳ ಮೇಲೆ ಪರಿಣಾಮ ಬೀರಿದ್ದು, ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಸಾಧ್ಯತೆ ಇದೆ.
ರಾಜ್ಯದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ (ನೈಋತ್ಯ ಮಾನ್ಸೂನ್) ವಾಡಿಕೆಯಂತೆ 839 ಮಿಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 633 ಮಿಮೀ ಮಳೆಯಾಗಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ನ ಎರಡನೇ ವಾರದವರೆಗೆ (ಈಶಾನ್ಯ ಮಾನ್ಸೂನ್) ವಾಡಿಕೆಯಂತೆ 188 ಮಿಮೀ ಮಳೆಯಾಗಬೇಕಿತ್ತು. ಆದರೆ, ಈ ಅವಧಿಗೆ 113 ಮಿಮೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಸ್ವಲ್ಪ ಮಳೆಯಾಗಿದ್ದರೂ ರಾಜ್ಯವು ಮಎ ಕೊರತೆಯನ್ನು ಎದುರಿಸುತ್ತಿದೆ. 31 ಜಿಲ್ಲೆಗಳ ಪೈಕಿ 24 ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿವೆ.
ಈ ವರ್ಷ 148 ಲಕ್ಷ ಮೆಟ್ರಿಕ್ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ, ಬರಗಾಲದ ಕಾರಣ 60 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳು ಮಾತ್ರ ಸಿಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ರಾಜ್ಯದ ಹಲವು ಭಾಗಗಳಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. ಎಲ್ಲೆಲ್ಲಿ ಬಿತ್ತನೆ ಮಾಡಲಾಗಿತ್ತೋ ಅಲ್ಲೆಲ್ಲ ನೀರಿಲ್ಲದೆ ಬೆಳೆಗಳು ಒಣಗಿದ್ದವು. ಇನ್ನು ಹಲವೆಡೆ ಫಸಲು ಕಳಪೆಯಾಗಿತ್ತು.
ಕಡಿಮೆ ಉತ್ಪಾದನೆ ಇದ್ದಾಗ ಆಹಾರ ಧಾನ್ಯಗಳ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಬೆಲೆ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಕ್ವಿಂಟಾಲ್‌ಗೆ 7,000 ರೂ.ಗೆ ಮಾರಾಟವಾಗುತ್ತಿದ್ದ ತೊಗರಿ ಬೇಳೆ ಈಗ 12,000 ರೂ.ಗೆ ಮಾರಾಟವಾಗುತ್ತಿದ್ದು, ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ಕೆಜಿ ಕಡ್ಲೆಬೇಳೆಗೆ 70 ರೂ. ಇದ್ದುದು ಈಗ 120 ರೂ. ಆಗಿದೆ. ಅದೇ ರೀತಿ ಉದ್ದಿನಬೇಳೆ ಕೆಜಿಗೆ 85 ರೂ.ನಿಂದ 130 ರೂ.ಗೆ ಏರಿಕೆಯಾಗಿದೆ. ಇತರ ಅಗತ್ಯ ವಸ್ತುಗಳ ಬೆಲೆಗಳೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.