2 ವರ್ಷದ ಮಗುವನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ವಿಷ ಸೇವಿಸಿದ ದಂಪತಿ!

Views: 199
ಕನ್ನಡ ಕರಾವಳಿ ಸುದ್ದಿ: ಕಾಸರಗೋಡು ಜಿಲ್ಲೆಯ ಮಂಜೇಶ್ವರ ವ್ಯಾಪ್ತಿಯ ಕಡಂಬಾರ್ ಎಂಬಲ್ಲಿ ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಕಡಂಬಾರ್ ಚೆಂಬದಪದವು ನಿವಾಸಿ ಅಜಿತ್ (35) ಮತ್ತು ಅವರ ಪತ್ನಿ. ಶಿಕ್ಷಕಿ ಶ್ವೇತಾ (27) ಮೃತ ದುರ್ದೈವಿಗಳು
ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ದಂಪತಿ ವಿಷ ಸೇವಿಸಿದ್ದಾರೆ. ಸಂಜೆ ಹೊತ್ತಿಗೆ ಮನೆಯಿಂದ ನರಳಾಟದ ಶಬ್ದ ಕೇಳಿಬಂದಿದ್ದು, ನೆರೆಹೊರೆಯವರು ತಕ್ಷಣ ಮನೆಗೆ ಧಾವಿಸಿದ್ದಾರೆ. ಅಜಿತ್ ಮತ್ತು ಶ್ವೇತಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಗಮನಿಸಿ ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜಿತ್ ಮಧ್ಯರಾತ್ರಿ 12.30ರ ಸುಮಾರಿಗೆ ಕೊನೆಯುಸಿರೆಳೆದರೆ, ಶ್ವೇತಾ ಮಂಗಳವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನೆ ನಡೆದ ದಿನ ಬೆಳಗ್ಗೆ ಅಜಿತ್ ತಮ್ಮ ಎರಡು ವರ್ಷದ ಮಗುವನ್ನು ಬಂದ್ಯೋಡ್‌ನಲ್ಲಿರುವ ಸಹೋದರಿಯ ಮನೆಯಲ್ಲಿ ಬಿಟ್ಟು ಬಂದಿದ್ದರು. “ಕೆಲವು ಕಡೆ ಹೋಗಬೇಕಿದ್ದು, ಸಂಜೆ ಮಗುವನ್ನು ಕರೆದುಕೊಂಡು ಹೋಗುವುದಾಗಿ ಅಜಿತ್ ಹೇಳಿದ್ದರು” ಎಂದು ಅವರ ಸಹೋದರಿ ತಿಳಿಸಿದ್ದಾರೆ. ಅಜಿತ್ ಅವರ ತಾಯಿ ಶರ್ಮಿಳಾ ಸ್ಥಳೀಯ ಬೊಂಡದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ತೆರಳಿದ ನಂತರ, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ದಂಪತಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಮೃತ ಶ್ವೇತಾ ವರ್ಕಾಡಿ ಬೇಕರಿ ಜಂಕ್ಷನ್ ಸಮೀಪದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಅರಿಮಳ ವಾರ್ಡ್ ಸದಸ್ಯೆ ಜಯಂತಿ ಯತೀಶ್ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಮಂಜೇಶ್ವರ ಪೊಲೀಸರು ಇದನ್ನು ಇನ್ನೂ ಖಚಿತಪಡಿಸಿಲ್ಲ. “ನಮ್ಮ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾದ ನಂತರ ನಿಖರ ಕಾರಣ ತಿಳಿಯಲಿದೆ” ಎಂದು ಮಂಜೇಶ್ವರ ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ.