ಧಾರ್ಮಿಕ

ಹಾಸನದಲ್ಲಿಗಣೇಶ ವಿಸರ್ಜನೆ ವೇಳೆ ಲಾರಿ ಹರಿದು: 9 ಜನರ ದುರ್ಮರಣ

Views: 140

ಕನ್ನಡ ಕರಾವಳಿ ಸುದ್ದಿ, ಮೈಸೂರು ಮಾರ್ಗದ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗಣಪತಿ ವಿಸರ್ಜನೆ ಮೆರವಣಿಗೆಯ ಮೇಲೆ ಲಾರಿ ಹರಿದು 9 ಮಂದಿ ಮೃತಪಟ್ಟಿದ್ದಾರೆ.

ಲಾರಿಯ ಚಕ್ರಕ್ಕೆ ಸಿಲುಕಿದ ನಾಲ್ವರು  ಸ್ಥಳದಲ್ಲೇ ಮೃತಪಟ್ಟಿದ್ದು, ಐದು ಜನರು ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಮೃತಪಟ್ಟವರಲ್ಲಿ ಏಳು ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ.

ಘಟನೆಯಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ದುರ್ಘಟನೆಯಿಂದಾಗಿ ಇಡೀ ಜಿಲ್ಲೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

200ಕ್ಕೂ ಹೆಚ್ಚು ಗ್ರಾಮಸ್ಥರು ಗಣೇಶನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದಿಂದ ಬಂದ ಲಾರಿ ಏಕಾಏಕಿ ಮೆರವಣಿಗೆ ಮೇಲೆ ಎರಗಿದ ಪರಿಣಾಮ ಅವಘಡ ಸಂಭವಿಸಿದೆ. ಸದ್ಯ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಗಣೇಶ ಚತುರ್ಥಿಯ ಅಂತಿಮ ದಿನವಾದ ಶುಕ್ರವಾರ , ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸಾಗಿತ್ತು. ಹೊಸಹಳ್ಳಿ-ಮೊಸಳೆ ರಸ್ತೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರು ಭಕ್ತಿ ಭಾವದಿಂದ ಗಣೇಶನ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದರು. ಇದೇ ವೇಳೆ, ವಿರುದ್ದ ದಿಕ್ಕಿನಿಂದ ಅತಿ ವೇಗವಾಗಿ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ನೇರವಾಗಿ ಮೆರವಣಿಗೆಯ ಜನಸಮೂಹದ ಮೇಲೆ ನುಗ್ಗಿದೆ.

ತಕ್ಷಣವೇ ರಕ್ಷಣಾ ಕಾರ್ಯ ಆರಂಭವಾಗಿದ್ದು, ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಹಾಸನದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸಾಗಿಸಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ.

 

 

Related Articles

Back to top button
error: Content is protected !!