ಇತರೆ

ಸುಜ್ಞಾನ ಪಿಯು ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’: ಬದುಕಿನ ಪರಿಷ್ಕಾರಕ್ಕೆ ಸಂಸ್ಕೃತ ಅಗತ್ಯ – ಆದರ್ಶ ಗೋಖಲೆ

Views: 20

ಕನ್ನಡ ಕರಾವಳಿ ಸುದ್ದಿ: “ಸಂಸ್ಕೃತ ಎಲ್ಲಿರುತ್ತದೆಯೋ ಅಲ್ಲಿ ಸಂಸ್ಕೃತಿ ಇರುತ್ತದೆ. ಸಂಸ್ಕೃತ ಜೀವನದ ಮೌಲ್ಯಗಳನ್ನು ಕಲಿಸಿ, ನರನನ್ನು ನಾರಾಯಣನನ್ನಾಗಿ ಹಾಗೂ ಮಾನವನನ್ನು ಮಾಧವನನ್ನಾಗಿ ಮಾರ್ಪಡಿಸುವ ದಿವ್ಯ ಭಾಷೆಯಾಗಿದೆ. ನಮ್ಮ ಬದುಕಿನ ಪರಿಷ್ಕಾರಕ್ಕೆ ಸಂಸ್ಕೃತ ಅತ್ಯಗತ್ಯ” ಎಂದು ಧರ್ಮಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿಗಳಾದ ಆದರ್ಶ ಗೋಖಲೆ ಹೇಳಿದರು.

ಸುಜ್ಞಾನ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದುವರಿದು ಮಾತನಾಡಿದ ಅವರು, “ಸಂಸ್ಕೃತ ನಮ್ಮನ್ನೆಲ್ಲ ಒಗ್ಗೂಡಿಸುವ ಭಾಷೆ. ಇಡೀ ಮನುಕುಲದ ಏಳಿಗೆಯನ್ನು ಬಯಸುವ ಉನ್ನತ ಚಿಂತನೆಗಳು ಹಾಗೂ ಬದುಕಿಗೆ ಬೇಕಾದ ಆಚಾರ-ವಿಚಾರಗಳು ಈ ಭಾಷೆಯಲ್ಲಿ ಅಡಗಿವೆ. ವಿದ್ಯಾರ್ಥಿಗಳು ಸಂಸ್ಕೃತವನ್ನು ಕೇವಲ ಅಂಕ ಗಳಿಸುವ ಸುಲಭ ಮಾಧ್ಯಮವೆಂದು ಪರಿಗಣಿಸದೇ, ತಮ್ಮ ಜೀವನದ ಸರ್ವಾಂಗೀಣ ಏಳಿಗೆಗಾಗಿ ಕಲಿಯಬೇಕು. ಈ ಕಾಲೇಜಿನಲ್ಲಿ ಸಂಸ್ಕೃತ ಭಾಷೆಗೆ ನೀಡಲಾಗುತ್ತಿರುವ ಮನ್ನಣೆ ಮತ್ತು ಪ್ರೋತ್ಸಾಹ ಕಂಡು ನಿಜಕ್ಕೂ ಸಂತಸವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, “ಭಾಷೆ ಎನ್ನುವುದು ಮನುಷ್ಯನ ವ್ಯಕ್ತಿತ್ವವನ್ನು ಹಾಗೂ ಜ್ಞಾನವನ್ನು ಶ್ರೀಮಂತಗೊಳಿಸುತ್ತದೆ. ಭಾಷೆಯನ್ನು ಕಲಿಯುವ ಆಸಕ್ತಿ ಮತ್ತು ಮುಕ್ತ ಮನಸ್ಸು ನಮ್ಮಲ್ಲಿರಬೇಕು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಆಯೋಜಿಸುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಶಿಕ್ಷಕಿ ಸುದಕ್ಷಿಣ ಉಡುಪ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button
error: Content is protected !!