ಸಾಮಾಜಿಕ

ಸಮೀಕ್ಷೆ ಅ.31ರ ವರೆಗೆ ವಿಸ್ತರಣೆ: ಇನ್ಮುಂದೆ ಶಿಕ್ಷಕರ ಬದಲು ಇತರ ಇಲಾಖೆಯ ಸಿಬ್ಬಂದಿಗಳಿಂದ ಸಮೀಕ್ಷೆ 

Views: 38

ಕನ್ನಡ ಕರಾವಳಿ ಸುದ್ದಿ: ನಿರೀಕ್ಷೆಯಂತೆ ಪೂರ್ಣವಾಗದ ಕಾರಣ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಅ.31ರವರೆಗೆ ವಿಸ್ತರಿಸಲು ಮತ್ತು ಶಿಕ್ಷಕರನ್ನು ಬಿಟ್ಟು ಇತರ ಇಲಾಖೆಯ ಸಿಬ್ಬಂದಿಯನ್ನು ಸಮೀಕ್ಷೆಗೆ ಬಳಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಯಿತು.

ಬಹುತೇಕ ಜಿಲ್ಲೆಗಳಲ್ಲಿ ಶೇ.95-98ರಷ್ಟು ಸಮೀಕ್ಷೆ ಉತ್ತಮ ಪ್ರಗತಿ ಕಂಡಿದೆ. ಆದರೆ, ರಾಮನಗರ, ಬೀದರ್, ಧಾರವಾಡ ಮೂರು ಜಿಲ್ಲೆಗಳಲ್ಲಿ ಶೇ.86-89ಕ್ಕಿಂತ ಕಡಿಮೆ ಪ್ರಗತಿ ಕಂಡಿದೆ.‌ ಬೆಂಗಳೂರಲ್ಲಿ ಅತೀ ಕಡಿಮೆ ಪ್ರಗತಿ ಕಂಡಿರುವ ಬಗ್ಗೆ ಚರ್ಚೆ ನಡೆಸಲಾಯಿತು. ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರದ ತನಕ ರಜೆ ಇದ್ದು, ಅ.23ರಿಂದ ಅ.31ರ ವರೆಗೆ ಸಮೀಕ್ಷೆ ನಡೆಸಿ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶಾಲೆ ಆರಂಭವಾಗುವುದರಿಂದ ಮುಂದಿನ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸುವುದಿಲ್ಲ. ಅ.23ರಿಂದ ಅ.31ರ ವರೆಗೆ ನಡೆಯುವ ಸಮೀಕ್ಷಾ ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.‌ ಶಿಕ್ಷಕರ ಬದಲಿಗೆ ಇತರ ಇಲಾಖೆಗಳ ಸಿಬ್ಬಂದಿಯನ್ನು ಸಮೀಕ್ಷೆ ಕಾರ್ಯದಲ್ಲಿ ಬಳಸುವಂತೆ ಸಿಎಂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಅ.23ರಿಂದ ಪುನಾರಂಭವಾಗುವ ಜಾತಿ ಸಮೀಕ್ಷೆಯಲ್ಲಿ ಶಿಕ್ಷಕರು ಪಾಲ್ಗೊಳ್ಳುವುದಿಲ್ಲ.

ಸಭೆಯ ಬಳಿಕ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕನಿಷ್ಠ ಶೇ.95ರಷ್ಟು ಸಮೀಕ್ಷೆ ಆಗಿದೆ. ಆದರೆ, ರಾಮನಗರ, ಬೀದರ್ ಮತ್ತು ಧಾರವಾಡದಲ್ಲಿ ಅಂದಾಜು ಶೇ.86-89 ಸಮೀಕ್ಷೆ ಪ್ರಗತಿ ಕಂಡಿದೆ. ಬೆಂಗಳೂರಿನಲ್ಲಿ ಬಹಳ ಕಡಿಕೆ ಸಮೀಕ್ಷೆ ನಡೆದಿದೆ. ಸುಮಾರು ಶೇ.45ರಷ್ಟು ಮಾತ್ರ ಪ್ರಗತಿ ಕಂಡಿದೆ ಎಂದರು.

ಅ.19ರ ವರೆಗೆ ನಡೆದ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸಿದ್ದರು. ಇನ್ನು ಮುಂದೆ ರಾಜ್ಯಾದ್ಯಂತ ಶಿಕ್ಷಕರು ಭಾಗವಹಿಸುವುದಿಲ್ಲ. ಶಿಕ್ಷಕರನ್ನು ಹೊರತುಪಡಿಸಿ ಬೇರೆ ಇಲಾಖೆಗಳಲ್ಲಿನ ಸಿಬ್ಬಂದಿಯಿಂದ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅ.31ರವರೆಗೆ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

Related Articles

Back to top button