ಧಾರ್ಮಿಕ

ಶ್ರಾವಣ ಮಾಸದಲ್ಲಿ ಆಚರಿಸುವ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬದ ವಿಶೇಷತೆ-ಆಚರಣೆ ಸಂದೇಶವೇನು?

Views: 40

ಕನ್ನಡ ಕರಾವಳಿ ಸುದ್ದಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ಮನೆಮನೆಗಳಲ್ಲಿ ಹಬ್ಬದ ಸಂಭ್ರಮ. ಬಾಗಿಲಿಗೆ ಮಾವಿನ ತೋರಣ, ಅಂಗಳದಲ್ಲಿ ರಂಗೋಲಿ, ಪೂಜಾಕೋಣೆಯಲ್ಲಿ ಲಕ್ಷ್ಮಿಯ ಅಲಂಕಾರ, ಅರಿಶಿನ-ಕುಂಕುಮದ ಪರಿಮಳ, ಕರ್ನಾಟಕದ ಬಹುತೇಕ ಮನೆಗಳಲ್ಲಿ ಈ ದಿನ ವಿಶೇಷವಾದದ್ದು, ಅದೇ ‘ವರಮಹಾಲಕ್ಷ್ಮೀ ವ್ರತ’

ವರಮಹಾಲಕ್ಷ್ಮೀ ಹಬ್ಬವು ಹೆಚ್ಚು ಜನರಿಂದ ಆಚರಿಸಲ್ಪಡುವ ಹಬ್ಬವಾಗಿದೆ. ವರಮಹಾಲಕ್ಷ್ಮೀ ಹಬ್ಬವನ್ನು ಸಾಮಾನ್ಯವಾಗಿ ಜನರು ವರಮಹಾಲಕ್ಷ್ಮೀ ವ್ರತ, ವರಮಹಾಲಕ್ಷ್ಮೀ ಪೂಜೆಯೆಂದು ಕರೆಯುತ್ತಾರೆ.

ಶ್ರಾವಣ ಮಾಸವು ಆಧ್ಯಾತ್ಮಿಕ ಜಾಗೃತಿಗೆ ಪವಿತ್ರ ಸಮಯ. ವರಲಕ್ಷ್ಮೀ ವ್ರತವು ಕುಟುಂಬದ ಸೌಭಾಗ್ಯ, ಸಂತಾನ ಮತ್ತು ಅಷ್ಟೈಶ್ವರ್ಯಕ್ಕಾಗಿ ಆಚರಿಸುವ ಪ್ರಮುಖ ಪೂಜೆಯಾಗಿದೆ.

ಆಚರಣೆಯು ಸಮಾಜಕ್ಕೆ ನೀಡುವ ಸಂದೇಶದಲ್ಲಿಯೂ ಅದರ ಅರ್ಥ ಅಡಗಿರುತ್ತದೆ.ಲಕ್ಷ್ಮೀ ಎಂದರೆ ಕೇವಲ ಹಣವಲ್ಲ: ನಮ್ಮ ಪರಂಪರೆಯಲ್ಲಿ ಲಕ್ಷ್ಮೀಯನ್ನು ಅಷ್ಟಲಕ್ಷ್ಮೀ ರೂಪಗಳಲ್ಲಿ ಕಾಣಲಾಗಿದೆ. ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಧೈರ್ಯಲಕ್ಷ್ಮೀ, ವಿದ್ಯಾ ಲಕ್ಷ್ಮೀ, ವಿಜಯಲಕ್ಷ್ಮೀ, ಸಂತಾನಲಕ್ಷ್ಮೀ, ಗಜಲಕ್ಷ್ಮೀ, ಆದಿಲಕ್ಷ್ಮೀ ಹೀಗೆ ಸಮೃದ್ಧಿಯ ಹಲವು ಆಯಾಮಗಳನ್ನು ನಮ್ಮ ಹಿರಿಯರು ಗುರುತಿಸಿದ್ದಾರೆ. ಒಬ್ಬ ವ್ಯಕ್ತಿ ಹಣವಂತನಾಗಿದ್ದರೆ ಮಾತ್ರ ಆತ ಸಮೃದ್ದನಲ್ಲ. ಆರೋಗ್ಯ, ವಿದ್ಯೆ, ಧೈರ್ಯ, ಕುಟುಂಬದ ನೆಮ್ಮದಿ, ಉತ್ತಮ ಸಂಬಂಧಗಳು, ಅನ್ನ, ಜ್ಞಾನ ಮತ್ತು ಸದ್ಗುಣಗಳೂ ಬದುಕಿನ ಸಂಪತ್ತಾಗಿದೆ. ಇದು ವರಮಹಾಲಕ್ಷ್ಮೀ ವ್ರತದ ಅತ್ಯಂತ ಸುಂದರವಾದ ಸಂದೇಶವಾಗಿದೆ.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಈ ತಿಂಗಳು ಕೇವಲ ಸಾಂಪ್ರದಾಯಿಕ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಆಧ್ಯಾತ್ಮಿಕ ಜಾಗೃತಿ, ಸಾಧನೆ ಮತ್ತು ಜ್ಞಾನಾರ್ಜನೆಗೆ ಅತ್ಯಂತ ಶ್ರೇಷ್ಠ ಸಮಯವಾಗಿದೆ. ‘ಶ್ರಾವಣ’ ನಕ್ಷತ್ರವು ಮೂಲತಃ ಜ್ಞಾನ ಮತ್ತು ಶ್ರವಣ ಅಂದರೆ ಆಲಿಸುವಿಕೆ ಗುಣಕ್ಕೆ ಸಂಬಂಧಿಸಿರುವುದರಿಂದ, ಈ ಮಾಸದಲ್ಲಿ ಮಂತ್ರ ಪಠಣ, ಸ್ತೋತ್ರ ಪಾರಾಯಣ ಹಾಗೂ ದಾನ ಧರ್ಮಗಳು ವಿಶೇಷ ಫಲವನ್ನು ನೀಡುತ್ತವೆ. ಶ್ರಾವಣ ಮಾಸದ ಶುಕ್ರವಾರಗಳಲ್ಲೇ ಅತ್ಯಂತ ವಿಶೇಷವಾದದ್ದು ವರಲಕ್ಷ್ಮೀ ವ್ರತ. ಮುತ್ತೈದೆಯರು ಮತ್ತು ಮಹಿಳೆಯರು ತಮ್ಮ ಕುಟುಂಬದ ಸೌಭಾಗ್ಯ, ಸಂತಾನ ಪ್ರಾಪ್ತಿ, ಸುಖ-ಶಾಂತಿ ಹಾಗೂ ಅಷ್ಟೈಶ್ವರ್ಯಕ್ಕಾಗಿ ಈ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ‘ವರ’ ಎಂದರೆ ಆಶೀರ್ವಾದ ಅಥವಾ ಅಭಯ. ತನ್ನನ್ನು ನಂಬಿದ ಭಕ್ತರಿಗೆ ಕೇಳಿದ ವರವನ್ನು ಕರುಣಿಸುವ ತಾಯಿಯೇ ವರಲಕ್ಷ್ಮೀ.

ಇನ್ನೊಂದು ಮುಖ್ಯ ಸಂಗತಿಯೆಂದರೆ, ವ್ರತವನ್ನು ಆಚರಿಸುವವರು ಅದರ ವಿಧಿ ವಿಧಾನಗಳ ಜತೆಗೆ ಅದರ ಆಂತರಿಕ ಆಶಯವನ್ನೂ ಅರ್ಥಮಾಡಿಕೊಳ್ಳಬೇಕು.

 

 

 

Related Articles

Back to top button
error: Content is protected !!