ಯುವಜನ

ಮೊಬೈಲ್ ಕೊಡಿಸದ್ದಕ್ಕೆ ಬೆಟ್ಟದಿಂದ ಹಾರಿದ ಮಗ; ಕಾಪಾಡಲು ಹಾರಿದ ತಂದೆ, ತಾಯಿಯೂ ಜಿಗಿದು ಆತ್ಮಹತ್ಯೆ 

Views: 23

ಕನ್ನಡ ಕರಾವಳಿ ಸುದ್ದಿ: ಹೊಸ ಮೊಬೈಲ್ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ 19 ವರ್ಷದ ಯುವಕನೊಬ್ಬ ಬೆಟ್ಟದಿಂದ ಜಿಗಿದ ಘಟನೆ ಮಹಾರಾಷ್ಟ್ರದಲ್ಲಿ ಶುಕ್ರವಾರ ನಡೆದಿದೆ. ಆತನನ್ನು ರಕ್ಷಿಸಲು ತೆರಳಿದ ತಂದೆಯೂ ಆತನೊಂದಿಗೆ ಬೆಟ್ಟದಿಂದ ಬಿದ್ದಿದ್ದು, ಇಬ್ಬರ ಸಾವಿನಿಂದ ನೊಂದ ತಾಯಿಯೂ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇವಲಾಯಿ ಪ್ರದೇಶದ ನಿವಾಸಿ ಕುನಾಲ್ ಚಂದ್‌ಗುಡೆ ಎಂಬ ಯುವಕ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬೆಟ್ಟದ ತುದಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಇದನ್ನು ತಿಳಿದ ಆತನ ತಂದೆ ಮುರಳೀಧರ್ ಚಂದ್‌ಗುಡೆ (48) ಮತ್ತು ತಾಯಿ ಸಂಗೀತಾ ತಕ್ಷಣ ಸ್ಥಳಕ್ಕೆ ಧಾವಿಸಿದ್ದರು. ವಾಪಸ್ ಬರುವಂತೆ ಮಗನ ಬಳಿ ಕೇಳಿಕೊಂಡಿದ್ದರು.

ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೂರು ಗಂಟೆಗಳ ಕಾಲ ಯುವಕನನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆಟ್ಟದ ಕೆಳಗೆ ರಕ್ಷಣಾ ಬಲೆಯನ್ನು ಅಳವಡಿಸಲು ಪ್ರಯತ್ನಿಸಿದರಾದರೂ, ಯುವಕ ಬೆಟ್ಟದ ತುದಿಯಲ್ಲೇ ಜಾಗ ಬದಲಾಯಿಸುತ್ತಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮಗನ ಬಳಿಗೆ ಹೋದ ತಂದೆ ಮುರಳೀಧರ್ ಆತನನ್ನು ರಕ್ಷಿಸಿ ಹಿಂದಕ್ಕೆ ಕರೆತರಲು ಯತ್ನಿಸಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಯುವಕ ಬೆಟ್ಟದಿಂದ ಜಿಗಿದಿದ್ದಾನೆ. ಆತನನ್ನು ಹಿಡಿಯಲು ಹೋದ ತಂದೆಯೂ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ.

ಕಣ್ಣೆದುರೇ ಗಂಡ ಮತ್ತು ಮಗ ಪ್ರಪಾತಕ್ಕೆ ಬಿದ್ದಿದ್ದನ್ನು ಕಂಡ ಸಂಗೀತಾ ಅವರು ಆಘಾತಕ್ಕೊಳಗಾಗಿ ಅದೇ ಕ್ಷಣದಲ್ಲಿ ಬೆಟ್ಟದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.

 

Related Articles

Back to top button
error: Content is protected !!