ಯುವಜನ

ಪ್ರೇಯಸಿಯ ಭೀಕರ ಕೊಲೆ: ಜರ್ಮನಿಯಲ್ಲಿ ಸಿಕ್ಕಿಬಿದ್ದ ಭಾರತೀಯ ಯುವಕ

Views: 33

ಕನ್ನಡ ಕರಾವಳಿ ಸುದ್ದಿ: ಅಮೆರಿಕದ ಅರಿಜೋನಾ ರಾಜ್ಯದ ಟಕ್ಸನ್ ನಗರದಲ್ಲಿ 19 ವರ್ಷದ ಪ್ರೇಯಸಿಯನ್ನು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ 20 ವರ್ಷದ ಭಾರತೀಯ ಯುವಕನನ್ನು ಜರ್ಮನಿ ಪೊಲೀಸರು ಬಂಧಿಸಿದ್ದಾರೆ.

ವರುಣ್ ಬಟ್ಚಿಗಾರಿ ಬಂಧಿತ ಆರೋಪಿ. ಈತ ತನ್ನ ಪ್ರೇಯಸಿ, ಕಾಲೇಜು ವಿದ್ಯಾರ್ಥಿನಿ ಜುಲಿಸ್ಸಾ ರೂಬಿ ಸಲಾಜರ್ (19) ಎಂಬಾಕೆಯನ್ನು ಹತ್ಯೆ ಮಾಡಿ ದೇಶ ತೊರೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ: ಟಕ್ಸನ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಜುಲಿಸ್ಸಾ ರೂಬಿ ಸಲಾಜರ್ ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಪರಿಶೀಲಿಸಿದಾಗ ಯುವತಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೃತನ ದೇಹದ ಮೇಲೆ ತೀವ್ರ ಗಾಯದ ಗುರುತುಗಳಿದ್ದು, ಆಕೆಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ಭಾರತಕ್ಕೆ ಪರಾರಿಯಾಗಲು ಯತ್ನ: ಕೃತ್ಯ ಎಸಗಿದ ಬಳಿಕ ಆರೋಪಿ ವರುಣ್, ಮೃತ ಯುವತಿಯ ಮೊಬೈಲ್ ಫೋನ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ದೋಚಿ ಟಕ್ಸನ್‌ನಿಂದ ಜರ್ಮನಿಯ ಬರ್ಲಿನ್‌ಗೆ ವಿಮಾನದಲ್ಲಿ ಪರಾರಿಯಾಗಿದ್ದ. ಬರ್ಲಿನ್‌ನಿಂದ ಭಾರತಕ್ಕೆ ತಪ್ಪಿಸಿಕೊಂಡು ಬರಲು ಆತ ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಹಸ್ತಾಂತರ ಪ್ರಕ್ರಿಯೆ ಆರಂಭ: ವರುಣ್ ವಿರುದ್ಧ ಪ್ರಥಮ ದರ್ಜೆ ಕೊಲೆ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ಅಮೆರಿಕ ತನಿಖಾಧಿಕಾರಿಗಳು ತಕ್ಷಣವೇ ಬಂಧನ ವಾರೆಂಟ್ ಜಾರಿಗೊಳಿಸಿದ್ದರು. ಈ ಕುರಿತು ಜರ್ಮನಿ ಅಧಿಕಾರಿಗಳಿಗೆ ತುರ್ತು ಮಾಹಿತಿ ನೀಡಿ, ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಿ ಬರ್ಲಿನ್‌ನಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಜರ್ಮನಿ ಪೊಲೀಸರ ವಶದಲ್ಲಿರುವ ಆರೋಪಿ ವರುಣ್‌ನನ್ನು ಅಮೆರಿಕದ ಅರಿಜೋನಾಗೆ ಹಸ್ತಾಂತರಿಸುವ ಕಾನೂನು ಪ್ರಕ್ರಿಯೆಗಳು ಪ್ರಗತಿಯಲ್ಲಿವೆ.

Related Articles

Back to top button
error: Content is protected !!