ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಿಂದ ಅನಾರೋಗ್ಯ ಪೀಡಿತರಿಗೆ 5 ಲಕ್ಷ ಧನ ಸಹಾಯ
Views: 37
ಕನ್ನಡ ಕರಾವಳಿ ಸುದ್ದಿ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿಯಿಂದ ಸಮಾಜಮುಖಿ ಸೇವೆಯ ಅಂಗವಾಗಿ, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಆರ್ಥಿಕವಾಗಿ ಹಿಂದುಳಿದ ಅರ್ಹ ಫಲಾನುಭವಿಗಳಿಗೆ 2026-27ನೇ ಸಾಲಿನ ಎರಡನೇ ಕಂತಿನ ಸುಮಾರು 15 ಲಕ್ಷ ವೈದ್ಯಕೀಯ ಧನಸಹಾಯವನ್ನು ವಿತರಿಸಲಾಯಿತು.
ದೇವಸ್ಥಾನಕ್ಕೆ ಸಲ್ಲಿಕೆಯಾಗಿದ್ದ 100ಕ್ಕೂ ಅಧಿಕ ಅರ್ಜಿಗಳನ್ನು ಪರಿಶೀಲಿಸಿ, ತುರ್ತು ಅಗತ್ಯವಿರುವ ಹಾಗೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಧನಸಹಾಯ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಅವರು, “ಶ್ರೀ ವಿನಾಯಕ ದೇವಸ್ಥಾನವು ಧಾರ್ಮಿಕ ಸೇವೆಯೊಂದಿಗೆ ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡುತ್ತಿದೆ. ಭಕ್ತಾದಿಗಳು ನೀಡುವ ಕಾಣಿಕೆಯ ಒಂದು ಭಾಗವನ್ನು ಸಂಕಷ್ಟದಲ್ಲಿರುವವರಿಗೆ ನೆರವಾಗಲು ವಿನಿಯೋಗಿಸಲಾಗುತ್ತಿದೆ. ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯ ನೀಡುವ ಸೇವೆಯನ್ನು ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ,” ಎಂದರು.
ದೇವಸ್ಥಾನದ ಧರ್ಮದರ್ಶಿ ಪದ್ಮನಾಭ ಉಪಾಧ್ಯಾಯ ಹಾಗೂ ಪರ್ಯಾಯ ಅರ್ಚಕ ಕೆ. ಸೂರ್ಯನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ದು, ಫಲಾನುಭವಿಗಳು ಹಾಗೂ ಅವರ ಕುಟುಂಬಸ್ಥರಿಗೆ ಶ್ರೀ ವಿನಾಯಕ ದೇವರ ಅನುಗ್ರಹ ದೊರೆಯಲಿ ಎಂದು ಹಾರೈಸಿದರು.
ವಿಶೇಷ ಅತಿಥಿಗಳಾಗಿ ದಿವಂಗತ ಕೋಟೇಶ್ವರ ಡಾ.ಕೃಷ್ಣರಾವ್ ಅವರ ಪುತ್ರರಾದ ವಾಸುದೇವ ರಾವ್, ರಮಾಕಾಂತ ರಾವ್ ಹಾಗೂ ಆನಂದ ರಾವ್ ಉಪಸ್ಥಿತರಿದ್ದರು. ಇವರ ಪ್ರಾಯೋಜಕತ್ವದಲ್ಲಿ ದೇವಸ್ಥಾನದ ವಠಾರದಲ್ಲಿ ನೂತನ ಉದ್ಯಾನವನ ನಿರ್ಮಾಣಕ್ಕೂ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರ ಆನೆಗುಡ್ಡೆ ಶಿಕ್ಷಣ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ವೈದ್ಯಕೀಯ ಧನಸಹಾಯವು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತಿದೆ.







