ವೈಎಸ್‌ಆರ್ ಕಾಂಗ್ರೆಸ್‌ನ ನಿರ್ಮಾಣ ಹಂತದ ಕೇಂದ್ರ ಕಚೇರಿ ಧ್ವಂಸ ಕಾರ್ಯಾಚರಣೆ ನಡೆಸಿದ ಆಂಧ್ರ ಸರ್ಕಾರ

Views: 80
ಗುಂಟೂರು ಜಿಲ್ಲೆಯ ಸೀತಾನಗರಂನಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಆಂಧ್ರ ಪ್ರದೇಶ ರಾಜಧಾನಿ ಪ್ರದೇಶಾಭಿವೃದ್ದಿ ಪ್ರಾಧಿಕಾರ (ಎಪಿಸಿಆರ್‌ಡಿಎ) ಹಾಗೂ ಮಂಗಳಗಿರಿ ತಾಡೆಪಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಟಿಎಂಸಿ) ಅಧಿಕಾರಿಗಳು ಶನಿವಾರ ಮುಂಜಾನೆ ಬುಲ್ಡೋಝರ್‌ಗಳ ಮೂಲಕ ಕೆಡವಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸದಿಂದ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಚೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿತ್ತು. ಕಟ್ಟಡ ಧ್ವಂಸವನ್ನು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತೀವ್ರವಾಗಿ ಖಂಡಿಸಿದ್ದು, “ಇದು ಚಂದ್ರಬಾಬು ನಾಯ್ಡು ಅವರ ಸರ್ವಾಧಿಕಾರ, ಆಡಳಿತಾರೂಢ ಟಿಡಿಪಿಯ ವಿನಾಶಕಾರಿ ಸೇಡಿನ ರಾಜಕಾರಣ” ಎಂದಿದ್ದಾರೆ.
ಇಂದು (ಜೂನ್ 22) ಮುಂಜಾನೆ ಐದು ಗಂಟೆ ಸುಮಾರಿಗೆ ಪುರಸಭೆ ಅಧಿಕಾರಿಗಳು ಬುಲ್ಡೋಝರ್‌ಗಳ ಮೂಲಕ ಕಟ್ಟಡ ಕೆಡವಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಧ್ವಂಸ ಕಾರ್ಯಾಚರಣೆ ಪೂರ್ಣಗೊಂಡಿದೆ. ಈ ವೇಳೆ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಬಾರದಂತೆ ತಡೆಯಲು ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಟ್ಟಡ ಧ್ವಂಸದಿಂದ ತಾಡೇಪಲ್ಲಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕಟ್ಟಡ ಕೆಡವುದನ್ನು ಪ್ರಶ್ನಿಸಿ ಇತ್ತೀಚೆಗೆ ವೈಎಸ್‌ಆರ್ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಕಾನೂನನ್ನು ಮೀರದಂತೆ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ಸೂಚನೆಯನ್ನು ವೈಎಸ್‌ಆರ್ ಕಾಂಗ್ರೆಸ್ ಪರ ವಕೀಲರು, ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದರು.
ಆದರೆ, ಈ ನಡುವೆ ಕಟ್ಟಡವನ್ನು ಕೆಡವಲಾಗಿದ್ದು, ಪಾಲಿಕೆ ಅಧಿಕಾರಿಗಳು ಹೈಕೋರ್ಟ್ ನಿರ್ದೇಶನವನ್ನು ನಿರ್ಲಕ್ಷಿಸಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಆರೋಪಿಸಿದೆ. ಯಾವುದೇ ನೋಟಿಸ್‌ಗಳನ್ನು ನೀಡಿಲ್ಲ. ಈ ಕ್ರಮಗಳು ನ್ಯಾಯಾಂಗ ನಿಂದನೆಯಾಗಿದೆ ಎಂದು ಪಕ್ಷವು ಹೇಳಿದೆ. ಅಧಿಕಾರಿಗಳ ನಡೆಯನ್ನು ಕೋರ್ಟ್ ಗಮನಕ್ಕೆ ತರುವುದಾಗಿ ತಿಳಿಸಿದೆ.
ಅಧಿಕಾರಿಗಳು ವೈಎಸ್‌ಆರ್ ಕಾಂಗ್ರೆಸ್ ಆರೋಪಗಳನ್ನು ತಿರಸ್ಕರಿಸಿದ್ದು, “ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಪಕ್ಷದ ಕಚೇರಿ ನಿರ್ಮಾಣವಾಗುತ್ತಿದೆ. ಹಿಂದಿನ ಜಗನ್ ಸರ್ಕಾರವು ಬೋಟ್ ಯಾರ್ಡ್ ಆಗಿ ಬಳಸಲಾಗಿದ್ದ ಭೂಮಿಯನ್ನು ವೈಎಸ್‌ಆರ್ ಕಾಂಗ್ರೆಸ್‌ನ ಕಚೇರಿಗೆ ಕಡಿಮೆ ವೆಚ್ಚದಲ್ಲಿ ಗುತ್ತಿಗೆಗೆ ಮಂಜೂರು ಮಾಡಿತ್ತು. ಇದು ಅಕ್ರಮ ನಿರ್ಮಾಣವಾಗಿದ್ದು, ಪಾಲಿಕೆ ನೋಟಿಸ್ ಜಾರಿ ಮಾಡಿದೆ. ಬಳಿಕ, ಕಟ್ಟಡವನ್ನು ಕೆಡವಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.






